ಪಂಚ ಸೂತ್ರ ಅಳವಡಿಸಿ ಕಾರ್ಯನಿರ್ವಹಿಸಿ: ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್​ ಖರ್ಗೆ ತಾಕೀತು

priyanaka
Published on

ಬೆಂಗಳೂರು:ಸಮನ್ವಯತೆ,ಸಮಯಪ್ರಜ್ಱ,ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಸಮಸ್ಯೆಗೆ ಸ್ಪಂದನೆ ಹಾಗೂ ಹೊಣೆಗಾರಿಕೆ ಈ ಪಂಚ ಸೂತ್ರ ಅಳವಡಿಸಿಕೊಂಡು ಅಧಿಕಾರಿಗಳು ಕಾರ್ಯನಿರ್ವಹಿಸಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ಸಲಹೆ ನೀಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಇಲಾಖೆ, ಖಾಸಗಿ ಹೋಟೆಲ್​ನಲ್ಲಿ ಶನಿವಾರ ಆಯೋಜಿಸಲಾಗಿದ್ದ "ಪಂಚಾಯತ್​ರಾಜ್​ ಅಧಿಕಾರಿಗಳ ಸಮ್ಮೇಳನ' ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರ ಜತೆ ಚೆನ್ನಾಗಿ ಸಮನ್ವಯತೆ ಹೊಂದಿದ್ದಾರೆ. ಆದರೆ, ಅಧಿಕಾರಿಗಳ ನಡುವೆ ಪರಸ್ಪರ ಸಮನ್ವಯತೆ ಇಲ್ಲ. ಕೆಲ ಅಧಿಕಾರಿಗಳು ಬರೀ ಮೊಬೈಲ್​ನಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ವರ್ತನೆ ಬದಲಾಗಬೇಕಿದೆ. ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಜೊತೆಗೆ ಇತರ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ದಕ್ಷತೆಯಿಂದ ಕೆಲಸ ಮಾಡಬೇಕು. ಆಳುವ ಪ್ರವೃತ್ತಿ ಬದಿಗಿರಿಸಿ ಜನರ ಸಮಸ್ಯೆ ಆಲಿಸಿ ಪರಿಹರಿಸುವ ಕಾರ್ಯ ಮಾಡಬೇಕು. ಪ್ರಗತಿಯೆಂದರೆ ಕೇವಲ ಅಂಕಿ ಅಂಶಗಳಲ್ಲ. ಗ್ರಾಮೀಣ ಜನರಿಗೆ ಬದುಕು ಸುಧಾರಣೆ ಮಾಡುವುದನ್ನು ಮುಖ್ಯ ಧ್ಯೇಯವಾಗಬೇಕು ಎಂದು ಸಲಹೆ ನೀಡಿದರು.

ನಾಲ್ಕು ಪ್ರಮುಖ ಯೋಜನೆಗಳು, ಆ್ಯಪ್​ ಹಾಗು ನೀತಿಯನ್ನು ಸಮ್ಮೇಳನದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಗ್ರಾಮೀಣ ಕುಡಿಯುವ ನೀರಿನ ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿ, ಜೀವಜಲ ನೀರಿನ ಗುಣಮಟ್ಟ ಆ್ಯಪ್​, ಸೇವಾ ದರ್ಶಕ ತಂತ್ರಾಂಶ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಆ್ಯಪ್​ ಲೋಕಾರ್ಪಣೆ ಮಾಡಿದ್ದೇವೆ.ಇದು ದೇಶಕ್ಕೆ ಮಾದರಿಯಾಗಿದೆ. ಮಹತ್ವ ಜವಾಬ್ದಾರಿ ಹೊಂದಿರುವ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆ ಹೋಗಲಾಡಿಸಲು ಸಮ್ಮೇಳನದ ಮುಖ್ಯ ಉದ್ದೇಶ. ಸಮ್ಮೇಳನದಲ್ಲಿ ನಡೆದ ಚರ್ಚೆ, ಅಭಿಪ್ರಾಯಗಳು ಗ್ರಾಮಗಳ ಅಭಿವೃದ್ಧಿ, ಪ್ರಗತಿ, ಕಾರ್ಯಕ್ರಮಗಳ ಸಬಲೀಕರಣಕ್ಕೆ ಸಹಾಯವಾಗಲಿದೆ ಎಂದು ತಿಳಿಸಿದರು. ಶಾಸಕ ಶರತ್​ ಬಚ್ಚೇಗೌಡ, ಇಲಾಖೆ ಕಾರ್ಯದರ್ಶಿ ಅಂಜುಮ್​ ಪರ್ವೇಜ್​, ಆಯುಕ್ತ ಪವನ್​ ಕುಮಾರ್​ ಮಾಲಿಪಾಟಿ ಸೇರಿ ಇಲಾಖೆ ಸೇರಿ ಮತ್ತಿತರರಿದ್ದರು.

ಹಲವು ಯೋಜನೆ ಜಾರಿ: ಒಂದೂವರೆ ವರ್ಷದಲ್ಲಿ ನಮ್ಮ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿಗಾಗಿ ಹಲವು ನೂತನ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಪ್ರಮುಖವಾಗಿ ಕೂಸಿನ ಮನೆ, ಅರಿವು ಕೇಂದ್ರ, ಸಮರ್ಪಕ ನ ತ್ಯಾಜ್ಯ ನಿರ್ವಹಣೆ, ರಾಜೀವ್​ ಗಾಂಧಿ ಪಂಚಾಯತ್​ ರಾಜ್​ ಫೆಲೋಶಿಪ್​, ಜವಾಬ್ದಾರಿ ನೆ, ಪ್ರಗತಿಪಥ, ಕಲ್ಯಾಣಪಥ, ಹೊಂಬೆಳಕು ಮುಂತಾದ ಯೋಜನೆಗಳನ್ನು ಜಾರಿಗೆ ಬಂದಿವೆ ಎಂದು ಸಚಿವ ಪ್ರಿಯಾಂಕ್​ ರ್ಖಗೆ ವಿವರಿಸಿದರು.ನಾವೀನ್ಯತೆ ಉದ್ದೇಶದಿಂದ ನರೇಗ, ಗ್ರಾಮೀಣ ಕುಡಿಯುವ ನೀರು ಮುಂತಾದ ಕಾರ್ಯಕ್ರಮಗಳನ್ನು ಸಬಲೀಕರಣ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಎಂದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ) ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಿರೀಕ್ಷಿತ. ಇಡಿ ಅವರ ಕಾರ್ಯಾಚರಣೆ ವ್ಯಾಪ್ತಿ ಪ್ರಶ್ನಿಸುತ್ತಿಲ್ಲ. ಬರೀ ಆಯ್ಕೆ ಆಧಾರಿತ ಮೇಲೆ ದಾಳಿ ಮಾಡುವುದು ಸರಿಯಲ್ಲ. ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ ಅವರ ಸೋದರನ ಮೇಲೆ ಬಂದಿರುವ ದೂರಿನ ಬಗ್ಗೆ ಇಡಿ ದೂರು ದಾಖಲಿಸಿ ತನಿಖೆ ನಡೆಸಬೇಕು. ಹಿಂದೆಯೇ ಬಿಜೆಪಿ ಟಿಕೆಟ್​ ಹಂಚಿಕೆ ಬಗ್ಗೆ ಹಲವು ಬಾರಿ ಆರೋಪ ಬಂದಿದ್ದರೂ ತನಿಖೆ ನಡೆಸಲು ಇಡಿ ಮೀನಮೇಷ ಎಣಿಸುತ್ತಿದೆ. ಬರುವ ದಿನಗಳಲ್ಲಿ ಯಾವುದಾದರೂ ವಿಚಾರ ಹುಡುಕಿ ನನಗೂ ನೋಟಿಸ್​ ಕೊಡಿಸುತ್ತಾರೆ.

|ಪ್ರಿಯಾಂಕ್​ ರ್ಖಗೆ, ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net