

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ನೀಡಿದ್ದ ಭರವಸೆಯಂತೆ ರಾಜ್ಯ ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ವ್ಯವಸ್ಥೆ (ಒಪಿಎಸ್)ಯನ್ನು ಜಾರಿಗೊಳಿಸಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಪೂರ ಒತ್ತಾಯಿಸಿದ್ದಾರೆ.
ಶಾಸಕರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್)ಯಿಂದ ನಿವೃತ್ತ ಸರ್ಕಾರಿ ನೌಕರರಿಗೆ ಯಾವುದೇ ಪ್ರಯೋಜನವಾಗದ ಕಾರಣದಿಂದ, ಅದರ ವಿರುದ್ಧ ಸಾಕಷ್ಟು ವಿರೋದ ವ್ಯಕ್ತವಾಗುತ್ತಿತ್ತು. ಹೀಗಾಗಿಯೇ ಕೇಂದ್ರ ಸರ್ಕಾರ ಇದೀಗ ಏಕೀಕೃತ ಪಿಂಚಣಿ ವ್ಯವಸ್ಥೆ (ಯುಪಿಎಸ್) ಜಾರಿಗೊಳಿಸಲು ಮುಂದಾಗಿದೆ. ಈ ಯೋಜನೆಯು ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗಲಿದೆ. ಹೀಗಾಗಿ ರಾಜ್ಯ ಸರ್ಕಾರಿ ನೌಕರರಿಗೆ ಎನ್‌ಪಿಎಸ್ ಅಡಿಯಲ್ಲಿಯೇ ಪಿಂಚಣಿ ದೊರೆಯಲಿದೆ. ಅದು ರಾಜ್ಯ ಸರ್ಕಾರದ ನಿವೃತ್ತ ನೌಕರರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಒಪಿಎಸ್ ಜಾರಿಗೊಳಿಸುತ್ತೇವೆ ಎಂದು ಕಾಂಗ್ರೆಸ್ ಘೋಷಿಸಿತ್ತು. ಸರ್ಕಾರ ರಚನೆಯಾಗಿ ಒಂದೂವರೆ ವರ್ಷವಾಗುತ್ತಿದ್ದರೂ, ಒಪಿಎಸ್ ಮರು ಜಾರಿಗೊಳಿಸಿಲ್ಲ. ಅಲ್ಲದೆ, ಒಪಿಎಸ್ ಜಾರಿ ಕುರಿತಂತೆ ವರದಿ ಪಡೆಯಲು ಸರ್ಕಾರ ಸಮಿತಿ ರಚಿಸಿದೆ. ಆದರೆ, ಇದು ಸರ್ಕಾರಿ ನೌಕರರ ಕಣ್ಣೊರೆಸುವ ತಂತ್ರವಾಗಿದ್ದು, ಅದನ್ನು ಬದಿಗಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಒಪಿಎಸ್ ಮತ್ತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿಂಧನಕೇರಾ ಮಾತನಾಡಿ, ಯುಪಿಎಸ್ ಜಾರಿಯಿಂದಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಶಿಕ್ಷಕರಿಗೂ ಅನುಕೂಲವಾಗಲಿದೆ. ಎನ್‌ಪಿಎಸ್ ರದ್ದು ಕೋರಿ ಸಾಕಷ್ಟು ಹೋರಾಟ ಮಾಡಿದ್ದೆವು. ಕೇಂದ್ರ ಸರ್ಕಾರ ಎನ್‌ಪಿಎಸ್‌ನಿಂದಾಗುವ ಸಮಸ್ಯೆಯನ್ನು ಅರಿತು ಇದೀಗ ಯುಪಿಎಸ್ ಜಾರಿಗೊಳಿಸುತ್ತಿರುವುದು ಸ್ವಾಗತಾರ್ಹ. ಈ ವ್ಯವಸ್ಥೆಯಿಂದ ಶಿಕ್ಷಕರು ಸೇರಿದಂತೆ ಕೇಂದ್ರ ಸರ್ಕಾರಿ ನೌಕರರು ನಿವೃತ್ತರಾದ ನಂತರ ಆರ್ಥಿಕ ಭದ್ರತೆ ದೊರೆಯಲಿದೆ ಎಂದು ಹೇಳಿದರು.
ಹಿರಿಯ ಪ್ರೌಢಶಾಲಾ ಶಿಕ್ಷಕರಿಗೆ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಾಗಿ ಬಡ್ತಿ ನೀಡಬೇಕು. ನಿಯಮದಂತೆ ಪಿಯು ಕಾಲೇಜುಗಳಿಗೆ ಶೇ. 75 ಉಪನ್ಯಾಸಕರನ್ನು ನೇರನೇಮಕಾತಿ ಹಾಗೂ ಶೇ. 25ರಷ್ಟು ಉಪನ್ಯಾಸಕರನ್ನು ಬಡ್ತಿ ಮೂಲಕ ನೇಮಕ ಮಾಡಿಕೊಳ್ಳಬೇಕು. ಆದರೆ, 2011ರಿಂದೀಚೆಗೆ ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ ನೀಡುವುದನ್ನೇ ನಿಲ್ಲಿಸಲಾಗಿದೆ. ಹಾಗೆಯೇ, ಪ್ರೌಢಶಾಲಾ ಶಿಕ್ಷಕರ ಕೆಲಸದೊತ್ತಡ ತಗ್ಗಿಸಲು, ಪಠ್ಯೇತರ ಕಾರ್ಯಗಳನ್ನು ಡಯಟ್ ಹಾಗೂ ಬಿಇಡಿ ಕಾಲೇಜು ಸಿಬ್ಬಂದಿಗೆ ವಹಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಶಶೀಲ್ ನಮೋಜಿ ಒತ್ತಾಯಿಸಿದರು.