

ಹೊಳೆನರಸೀಪುರ : ಪಟ್ಟಣದ ಶ್ರೀ ಮಹಾಗಣಪತಿ ಮೂರ್ತಿಯನ್ನು ಪವಿತ್ರ ಹೇಮಾವತಿ ನದಿಯಲ್ಲಿ ಭಾನುವಾರ ತೆಪ್ಪೋತ್ಸವ ನಡೆಸಿ ವಿಸರ್ಜಿಸಲಾಯಿತು.
ಪಟ್ಟಣದ ತಾಲೂಕು ಕಚೇರಿಯ ಮುಂಭಾಗದ ಸಾರ್ವಜನಿಕ ಸಮುದಾಯ ಭವನದಲ್ಲಿ ಕಳೆದ ಒಂದು ತಿಂಗಳಿಂದ ಶ್ರೀ ಮಹಾಗಣಪತಿ ಸೇವಾ ಸಮಿತಿ ಸಾರ್ವಜನಿಕರ ಸಹಕಾರದೊಂದಿಗೆ ವಿಜೃಂಭಣೆಯಿಂದ ಮಹೋತ್ಸವ ನಡೆಸಲಾಯಿತು. ನಿತ್ಯ ಪ್ರಸಾದ ವಿನಿಯೋಗ, ಹೋಮ, ಹವನ ಶಾಸ್ತ್ರೋಕ್ತವಾಗಿ ಪೂಜೆ, ಅಲಂಕಾರಗಳು ಭಕ್ತರ ಮನ ಸೆಳೆಯಿತು.
ಶನಿವಾರ ರಾತ್ರಿ ವಿವಿಧ ಕಲಾತಂಡಗಳೊಂದಿಗೆ ಶ್ರೀ ಗಣೇಶ ಮೂರ್ತಿಯನ್ನು ಮೆರವಣಿಗೆ ನಡೆಸಲಾಯಿತು. ಪಟ್ಟಣದಾದ್ಯಂತ ಪ್ರಮುಖ ಬೀದಿಗಳಲ್ಲಿ ನಾದಸ್ವರ, ವೀರಗಾಸೆ, ಚಂಡೆ, ಮದ್ದಳೆ, ಡೊಳ್ಳುಕುಣಿತ, ಬೊಂಬೆಗಾರುಡಿ, ಯಕ್ಷಗಾನ, ಕೀಲುಕುದುರೆ ಪ್ರದರ್ಶನ ನಡೆಸಲಾಯಿತು. ನದಿಯಲ್ಲಿ ತೆಪ್ಪೋತ್ಸವ ನಡೆಸಿದ ನಂತರ ವಿಸರ್ಜಿಸಲಾಯಿತು. ಯುವಕರು ಉತ್ಸಾಹದಿಂದ ಮೆರವಣಿಗೆ, ತೆಪ್ಪೋತ್ಸವದಲ್ಲಿ ಭಾಗವಹಿಸಿ ನಡೆಸಿಕೊಟ್ಟರು.
ಪುರಸಭೆ ಅಧ್ಯಕ್ಷ ಎಚ್.ಕೆ.ಪ್ರಸನ್ನ, ಉದ್ಯಮಿ ಟಿ.ಶಿವಕುಮಾರ್, ಗಣಪತಿ ಸೇವಾ ಸಮಿತಿ ಕಾರ್ಯಾಧ್ಯಕ್ಷ ಎಚ್.ಎಸ್.ಪುಟ್ಟಸ್ವಾಮಪ್ಪ, ಕಸಾಪ ತಾಲೂಕು ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ಖಜಾಂಚಿ ಗೋಕುಲ್, ಕಾರ್ಯದರ್ಶಿ ವೈ.ವಿ.ಚಂದ್ರಶೇಖರ್, ಮುರಳಿ, ದೇವಪ್ಪ ಸೇರಿದಂತೆ ಇತರರು ಇದ್ದರು.