

ವಿಜಯವಾಣಿ ಸುದ್ದಿಜಾಲ ಬೈಂದೂರು
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಾಳಿಮಳೆ, ಕಡಲ್ಕೊರೆತ ಮತ್ತು ನೆರೆಯಿಂದ ಆಗಿರುವ ಹಾನಿಗಳಿಗೆ ಶೀಘ್ರ ಪರಿಹಾರ ಒದಗಿಸಬೇಕು ಮತ್ತು ಅಗತ್ಯ ಮೂಲಸೌಕರ್ಯ ಪೂರೈಸಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಪಂ ಕಚೇರಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿದರು. ನಿರಂತರ ಮಳೆಯಿಂದ ನೆರೆ, ಪ್ರವಾಹದಿಂದ ಅನೇಕರ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿವೆ. ಕೆಲವು ಕಡೆಗಳಲ್ಲಿ ರಸ್ತೆ ಹಾಳಾಗಿದೆ. ಇನ್ನು ಕೆಲವು ಭಾಗದಲ್ಲಿ ಕಡಲ್ಕೊರೆತದಿಂದ ತೆಂಗಿನ ಮರ ಸಹಿತ ಆಸ್ತಿಪಾಸ್ತಿಗೆ ಅಪಾರ ಹಾನಿ ಉಂಟಾಗಿದೆ. ಇದೆಲ್ಲದಕ್ಕೂ ಶೀಘ್ರವೇ ಪರಿಹಾರ ಒದಗಿಸುವ ಕಾರ್ಯ ಆಗಬೇಕು ಎಂದರು.
ಮಳೆಯಿಂದ ಅಪಾರ ಪ್ರಮಾಣದಲ್ಲಿ ಭತ್ತದ ಗದ್ದೆಗಳಿಗೆ ಹಾನಿಯಾಗಿವೆ. ಬೆಳೆ ಹಾನಿ ಸಮೀಕ್ಷೆ ವೈಜ್ಞಾನಿಕವಾಗಿ ಪರಿಹಾರ ಒದಗಿಸುವ ಕಾರ್ಯ ಆಗಬೇಕು. ತೋಟಗಾರಿಕೆ ಬೆಳೆಗಳಿಗೂ ಹಾನಿಯಾಗಿದೆ. ಎಷ್ಟು ಭಾಗದಲ್ಲಿ ಹಾನಿಯಾಗಿದೆ ಎಂಬುದನ್ನು ಗುರುತಿಸಿ, ಆದಷ್ಟು ಬೇಗ ರೈತರಿಗೆ, ಬೆಳೆಗಾರರಿಗೆ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.
ಮಳೆಹಾನಿ ಸಹಿತ ಪ್ರಕೃತಿ ವಿಕೋಪದಿಂದ ಆಗುತ್ತಿರುವ ಹಾನಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಬರಲು ವಿಳಂಬ ಆಗುತ್ತಿರುವ ಬಗ್ಗೆ ದೂರು ಬರುತ್ತಿವೆ. ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಪ್ರಕೃತಿ ವಿಕೋಪದಿಂದ ಮನೆಗಳು ಸಂಪೂರ್ಣ ಹಾನಿಯಾದಾಗ 5 ಲಕ್ಷದವರೆಗೂ ಪರಿಹಾರ ನೀಡಲಾಗುತಿತ್ತು. ಅದನ್ನು ಈಗ 1.20 ಲಕ್ಷಕ್ಕೆ ಸೀಮೀತಗೊಳಿಸಿದ್ದಾರೆ. ಪರಿಹಾರ ನೀಡುವಾಗ ನಾನಾ ತಾಂತ್ರಿಕ ಸಮಸ್ಯೆ ಹಾಗೂ ಕುಂಟು ನೆಪ ನಿಲ್ಲಿಸಬೇಕು. ಹಾನಿಗೊಳಗಾದವರ ಸಂಕಷ್ಟ ಅರಿತು ಕೂಡಲೇ ಹೆಚ್ಚಿನ ಪರಿಹಾರ ನೀಡಬೇಕು ಎಂದು ನಿರ್ದೇಶಿಸಿದರು.
ತಹಸೀಲ್ದಾರ್ ಪ್ರದೀಪ್ ರಾಮ್, ಇಒ ಭಾರತಿ ಎನ್., ಬಿಇಒ ನಾಗೇಶ್ ಕೆ.ನಾಯ್ಕ, ಆರ್ಎಫ್ಒ ಸಂದೇಶ್, ಪಿಎಸ್ಐ ತಿಮ್ಮೇಶ್ ಬಿ.ಎನ್., ಪಪಂ ಸಿಒ ಅಜಯ್ ಭಾಸ್ಕರ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮಳೆಗಾಲದಲ್ಲಿ ಸಾರ್ವಜನಿಕರಿಂದ ಹಲವು ದೂರು ಬರುತ್ತಿರುತ್ತದೆ. ಎಲ್ಲ ದೂರುಗಳನ್ನು ತಾಳ್ಮೆಯಿಂದ ಸ್ವೀಕರಿಸಬೇಕು ಮತ್ತು ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತಿಸಬೇಕು. ಅವರ ಸಮಸ್ಯೆಗಳಿಗೆ ಧ್ವನಿಯಾಗಬೇಕೇ ವಿನಃ ಅವರೊಂದಿಗೆ ದರ್ಪದಿಂದ ವರ್ತಿಸಬಾರದು. ಹೀಗಾಗಿ ಇಡೀ ತಾಲೂಕು ತಂಡ ಮಳೆಗಾಲದ ಸೇವೆ ಸಜ್ಜಾಗಿರಬೇಕು. ಅಲ್ಲದೆ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಶಾಸಕರು ಸೂಚಿಸಿದರು.
ಕ್ಷೇತ್ರದ ಶಾಲಾ ಕಟ್ಟಡಗಳಿಗೆ ಮಳೆಯಿಂದ ಹೆಚ್ಚಿನ ಹಾನಿಯಾಗಿರುವ ಬಗ್ಗೆ ದೂರು ಕೇಳಿ ಬರುತ್ತಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಪ್ರತಿ ಶಾಲೆಯಿಂದ ವರದಿ ಪಡೆಯಬೇಕು, ಅಲ್ಲದೆ ಅಗತ್ಯವಿರುವ ಕಡೆಗಳಲ್ಲಿ ತುರ್ತು ಕಟ್ಟಡ ವ್ಯವಸ್ಥೆ ಅಥವಾ ಬದಲಿ ಕಟ್ಟಡ ವ್ಯವಸ್ಥೆ ಮಾಡಬೇಕು. ಶೈಕ್ಷಣಿಕ ವಿಚಾರದಲ್ಲಿ ಯಾವುದೇ ವಿಳಂಬ ಧೋರಣೆ ಸರಿಯಲ್ಲ ಎಂಬ ನಿರ್ದೇಶನ ನೀಡಿದರು.