

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಕಟ್‌ಬೆಲ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ವಾರ್ಡಿನ ಹರೇಗೋಡು ಪರಿಸರದ ಖಾಸಗಿ ಜಾಗದಲ್ಲಿರುವ ತೋಡು ಮುಚ್ಚಿದ್ದರಿಂದ ಅಲ್ಲಿರುವ 60ಕ್ಕೂ ಹೆಚ್ಚು ರೈತರ 50 ಎಕರೆಗೂ ಅಧಿಕ ಗದ್ದೆಗಳಲ್ಲಿ ಬೆಳೆದ ಹಂಗಾಮಿನ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಬೆಳೆ ಸೊಂಪಾಗಿ ಬೆಳೆದರೂ ಸಂಪೂರ್ಣ ನೀರು ಪಾಲಾಗುತ್ತಿದೆ ಎಂಬುದು ರೈತರ ನೋವು.
ಕೆಲವು ದಿನಗಳಿಂದ ಸತತ ಮಳೆಯಾಗುತ್ತಿದ್ದು, ಹರೇಗೋಡು ಗದ್ದೆಗಳಲ್ಲಿ ನೀರು ನಿಲ್ಲುತ್ತಿದೆ. ಜತೆಗೆ ಹೆಮ್ಮಾಡಿ- ಕೊಲ್ಲೂರು ಮುಖ್ಯ ರಸ್ತೆಯಾಗಿ ಸುಳ್ಸೆ ಮೂಲಕ ಬರುವ ನೀರು ಹರಿದು ನೇರ ಚಕ್ರ ನದಿಗೆ ಸೇರುತ್ತಿದ್ದು, ಆದರೆ ನೀರು ಸೇರಲು ದಾರಿಯಾದ ತೋಡನ್ನೇ ಮುಚ್ಚಲಾಗಿದೆ. 20 ದಿನಗಳಿಂದ ನೀರು ಗದ್ದೆಗಳಿಗೆ ಹರಿಯುತ್ತಿದ್ದು, ನಾಟಿ ಹಾಗೂ ಬಿತ್ತನೆ ಮಾಡಲಾದ ಸಸಿಗಳು ನಾಶವಾಗಿವೆ.
ಸುಳ್ಸೆ ಕ್ರಾಸ್‌ನಿಂದ ಈ ತೋಡಿಗೆ ನೀರು ಹರಿದು ರಾಜಾಡಿಯಲ್ಲಿ ಚಕ್ರ ನದಿಗೆ ಸೇರುತ್ತಿದ್ದು, ಅನಾದಿ ಕಾಲದಿಂದಲೂ ಈ ತೋಡು ಇದೆ. ಇದರ ಸಮೀಪವೇ ಇರುವ ಭೂಮಿ ಮಾರಾಟದ ಸಂದರ್ಭ ತೋಡು ಸಹಿತ ಭೂಪ್ರದೇಶವನ್ನು ಅಧಿಕಾರಿಗಳೇ ಮಾಪನ ಮಾಡಿದ್ದಾರೆ. ಭೂಮಿ ಖರೀದಿಸಿದವರು ಈ ತೋಡನ್ನು ಮುಚ್ಚಿ ಸಮತಟ್ಟು ಮಾಡಿದ್ದು, ನೀರು ಗದ್ದೆಗೆ ಹರಿಯಲು ಕಾರಣವಾಗಿದೆ. ಜೋರು ಮಳೆ ಸಂದರ್ಭ ಒಂದೆರಡು ಮನೆಗಳಿಗೂ ನೀರು ನುಗ್ಗುತ್ತಿದ್ದು, ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದರೂ ಉಪಯೋಗವಿಲ್ಲ ಎಂದು ಮನೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ರೈತ ಚಂದ್ರಶೇಖರ್ ಭಟ್ ಹರೆಗೋಡು ಪ್ರತಿಕ್ರಿಯಿಸಿದ್ದು, ತೋಡು ಮುಚ್ಚುವ ಸಂದರ್ಭ ಮಳೆ ನೀರು ಹರಿಯದಂತೆ ತಡೆಯಲು ಪೈಪು ಅಳವಡಿಸುವುದಾಗಿ ಭೂಮಿ ಖರೀದಿದಾರರು ಭರವಸೆ ನೀಡಿದ್ದರೂ ಬಳಿಕ ವಿಫಲರಾಗಿದ್ದಾರೆ. ಸ್ಥಳೀಯ ಶಾಸಕರಿಗೂ ಮನವಿ ನೀಡಲಾಗಿದ್ದು, ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕೂಡ ಇದರತ್ತ ವಿಶೇಷ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ತೋಡು ಮುಚ್ಚಿದ್ದರಿಂದ ಇಲ್ಲಿನ ಗದ್ದೆಗಳಿಗೆ ಸಮಸ್ಯೆ ಆಗಲಿದೆಯೆಂದು ರೈತರು ಮಳೆಗಾಲ ಆರಂಭಕ್ಕೂ ಮೊದಲೇ ಪಂಚಾಯಿತಿಗೆ ತಿಳಿಸಿದ್ದು, ಗ್ರಾಮಸಭೆಯಲ್ಲಿ ಚರ್ಚೆಯೂ ನಡೆದಿತ್ತು. ಜತೆಗೆ ಗ್ರಾಮ ಆಡಳಿತ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದರೂ, ಅವರು ನಿರ್ಲಕ್ಷೃ ವಹಿಸಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂರು ಎಕರೆ ಕೃಷಿ ಭೂಮಿ ಹೊಂದಿರುವ ಪ್ರದೇಶದಲ್ಲಿ 50 ವರ್ಷಗಳಿಮದ ಭತ್ತದ ಕೃಷಿ ಮಾಡಲಾಗುತ್ತಿದೆ. ಈ ಗದ್ದೆಯ ಸಮೀಪದ ಮಳೆ ನೀರು ಹರಿಯುವ ತೋಡನ್ನು ಮುಚ್ಚಿರುವುದರಿಂದ ಕೃಷಿ ನಾಶವಾಗುತ್ತಿದೆ. ಇದೇ ರೀತಿ ಮುಂದುವರಿದರೆ ಊಟಕ್ಕೆ ಗತಿ ಇಲ್ಲದಂತಾಗಬಹುದು.-ಮರಿಯ ಪೂಜಾರಿ, ಸ್ಥಳೀಯ ರೈತ