

ಬೆಂಗಳೂರು: ಐಎಂಎ ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಮೇಲೆ ಸಿಬಿಐನಿಂದ ಪೂರಕವಾಗಿ ಮತ್ತೊಂದು ಚಾರ್ಜ್‌ಶೀಟ್ ಸಲ್ಲಿಕೆ ಆಗಿದೆ. ರೋಷನ್ ಬೇಗ್ ಮಾತ್ರವಲ್ಲದೆ ಅವರ ಸಂಸ್ಥೆ ಹಾಗೂ ಸಮೂಹ ಸಂಸ್ಥೆಯೊಂದರ ವ್ಯವಸ್ಥಾಪ ನಿರ್ದೇಶಕರ ಹೆಸರನ್ನೂ ಈ ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದ್ದು, ಇಂದು ಸಿಬಿಐ ವಿಶೇಷ ನ್ಯಾಯಾಧೀಶರ ಮುಂದೆ ಸಲ್ಲಿಸಲಾಗಿದೆ.
ರೋಷನ್ ಬೇಗ್ ಐಎಂಎ ಕಂಪನಿಯಿಂದ ಹಲವಾರು ಕೋಟಿ ರೂಪಾಯಿಗಳನ್ನು ಪಡೆದಿರುವುದು, ಅದನ್ನು ಚುನಾವಣಾ ವೆಚ್ಚಕ್ಕೆ ಬಳಸಿರುವುದು ಮಾತ್ರವಲ್ಲದೆ ತಮ್ಮ ಸಂಸ್ಥೆ ದಿನವಹಿ ಖರ್ಚು ಹಾಗೂ ಉದ್ಯೋಗಿಗಳ ವೇತನ ವಿತರಣೆಗೂ ಈ ಹಣವನ್ನು ಬಳಸಿರುವ ಕುರಿತು ಚಾರ್ಜ್‌ಶೀಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐ ಮೂರು ಪೂರಕ ದೋಷಾರೋಪಣಾ ಪಟ್ಟಿಗಳನ್ನು ಸಲ್ಲಿಸಿದ್ದು, ಒಟ್ಟು 33 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಐಎಂಎ ಸುಮಾರು ಒಂದು ಲಕ್ಷ ಮಂದಿಯಿಂದ ಹೆಚ್ಚೂಕಡಿಮೆ 4000 ಕೋಟಿ ರೂಪಾಯಿ ಸಂಗ್ರಹಿಸಿದ್ದು, ಅದರಲ್ಲಿ ಬಹಳಷ್ಟು ಹಣವನ್ನು ಬೇಗ್ ಅವರಿಗೆ ನೀಡಲಾಗಿದೆ. ಆ ಮೂಲಕ ಸಂಸ್ಥೆಯೂ ಕಾನೂನುಬಾಹಿರವಾಗಿ ಮುಂದುವರಿಯಲು ಯತ್ನಿಸಿತ್ತು ಎಂಬುದು ಸಿಬಿಐ ಹೇಳಿದೆ.