ಐಪಿಎಸ್​ ಅಧಿಕಾರಿಗಳಿಬ್ಬರಿಗೆ ಶುರುವಾಯ್ತು ಭಾರಿ ಸಂಕಷ್ಟ!

IMA_Jewels_Incident_@_Shivaji_Nagar-2
Published on

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಐಪಿಎಸ್​ ಅಧಿಕಾರಿಗಳಾದ ಹೇಮಂತ್​ ನಿಂಬಾಳ್ಕರ್​ ಮತ್ತು ಅಜಯ್​ ಹಿಲೋರಿ ಕುರಿತು ಸಿಬಿಐ ಅಧಿಕಾರಿಗಳಿಂದ ತನಿಖಾ ವರದಿ ತರಿಸಿಕೊಳ್ಳುವಂತೆ ಐಎಂಎ ಸಕ್ಷಮ ಪ್ರಾಧಿಕಾರದ ವಿಶೇಷ ತನಿಖಾಧಿಕಾರಿ ಹರ್ಷಾಗುಪ್ತಾ ಅವರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಐಎಂಎ ಸಂಸ್ಥೆಯ ಮಾಲೀಕ ಮೊಹಮದ್​ ಮನ್ಸೂರ್​ ಖಾನ್​ ಪರ ವರದಿ ನೀಡಿದ್ದಾರೆ ಎನ್ನಲಾದ ಐಪಿಎಸ್​ ಅಧಿಕಾರಿಗಳಾದ ಹೇಮಂತ್​ ನಿಂಬಾಳ್ಕರ್​ ಹಾಗೂ ಅಜಯ್​ ಹಿಲೋರಿ ವಿರುದ್ಧ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಿಬಿಐ ಅಧಿಕಾರಿಗಳಿಂದ ತನಿಖಾ ವರದಿ ತರಿಸಿಕೊಂಡು ಐಪಿಎಸ್​ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಹರ್ಷಗುಪ್ತ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಹರ್ಷಾಗುಪ್ತಾ ಮಂಗಳವಾರ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪತ್ರ ಕೈ ಸೇರಿದ ಬಳಿಕ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿಬಿಐನಿಂದ ತನಿಖಾ ವರದಿ ತರಿಸಿಕೊಂಡು, ಲಂಚ ಪಡೆದಿರುವುದು ಕಂಡು ಬಂದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಐಎಂಎ ಮಾಲೀಕ ಮೊಹಮದ್​ ಮನ್ಸೂರ್​ ಖಾನ್​ ಪರ ವರದಿ ನೀಡಿದ ಇಬ್ಬರು ಐಪಿಎಸ್​ ಅಧಿಕಾರಿಗಳು ಇದಕ್ಕೆ ಪ್ರತಿಯಾಗಿ ಆತನಿಂದ ಏನೆಲ್ಲ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಇದೀಗ ಐಪಿಎಸ್​ ಅಧಿಕಾರಿಗಳಿಗೆ ಮತ್ತೆ ಸಿಬಿಐ ಕಂಟಕ ಎದುರಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net