

ಹನೂರು: ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡದೆ ಪ್ರತಿಯೊಬ್ಬರೂ ಕಾನೂನು ಪಾಲಿಸಿ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಟಿ.ಬಿ ಕವಿತಾ ತಿಳಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ಗಡಿ ಗ್ರಾಮ ಪಾಲಾರ್ ಸೋಲಿಗರ ಹಾಡಿಯ ಗಿರಿಜನರಿಗೆ ಸೋಮವಾರ ಪೊಲೀಸ್ ಇಲಾಖೆ ಹಾಗೂ ಬೆಂಗಳೂರು ರೋಟರಿ ಕ್ಲಬ್ ವತಿಯಿಂದ ಕೊಡುಗೆ ನೀಡಿದ ರಾಗಿ ಫ್ಲೋರ್‌ಮಿಲ್ ಉದ್ಘಾಟಿಸಿ ಮಾತನಾಡಿದರು. ಗಡಿ ಭಾಗವಾಗಿರುವ ಇಲ್ಲಿ ಈ ಹಿಂದೆ ಕಳ್ಳ ಸಾಗಣೆ, ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು. ಇದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಿತ್ತು. ಈಗ ತಗ್ಗಿದೆ. ಪ್ರತಿಯೊಬ್ಬರೂ ಶಾಂತಿ, ಸೌಹಾರ್ದತೆಯಿಂದ ಜೀವನ ನಡೆಸಬೇಕು. ಹಾಗಾಗಿ ಈ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ನಡೆಯಬಾರದು. ಒಂದು ವೇಳೆ ಈ ಬಗ್ಗೆ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ಮಾಹಿತಿ ತಿಳಿಸಬೇಕು. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಬಳಿಕ ಪಾಲಾರ್ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದ ಎಸ್ಪಿ, ಇಲ್ಲಿನ ಕಾರ್ಯವೈಖರಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ತಮಿಳುನಾಡು ಹಾಗೂ ರಾಜ್ಯಕ್ಕೆ ಆಗಮಿಸುವ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಕಾನೂನುಬಾಹಿರ ವಸ್ತುಗಳ ಸಾಗಣೆ ಕಂಡು ಬಂದಲ್ಲಿ ಶಿಸ್ತುಕ್ರಮ ಜರುಗಿಸಬೇಕು. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಎಚ್ಚರಿಸಿದರು.
ಹುತಾತ್ಮ ಸ್ಮಾರಕಕ್ಕೆ ನಮನ:
ಪಾಲಾರ್ ಸಮೀಪ 1990ರಲ್ಲಿ ಕಾಡುಗಳ್ಳ ವೀರಪ್ಪನ್ ಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಪೊಲೀಸರು ಹತ್ಯೆಯಾದ ಸ್ಥಳದಲ್ಲಿ ನಿರ್ಮಿಸಿರುವ ಹುತಾತ್ಮರ ಸ್ಮಾರಕಕ್ಕೆ ತೆರಳಿ ಗೌರವ ವಂದನೆ ಸಲ್ಲಿಸಿದರು. ಹೊಗೇನಕಲ್‌ಗೆ ಭೇಟಿ ನೀಡಿ ನೀರಿನ ಹರಿವು ಹೆಚ್ಚಿರುವುದರಿಂದ ನದಿ ಪಾತ್ರದ ಗ್ರಾಮಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಯಾವುದೇ ಅನಾಹುತ ಸಂಭವಿಸದಂತೆ ಅಗತ್ಯ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇನ್‌ಸ್ಪೆಕ್ಟರ್ ಜಗದೀಶ್, ಪೊಲೀಸ್ ಸಿಬ್ಬಂದಿ, ಗ್ರಾಮಸ್ಥರು ಇದ್ದರು.