ಗೋವಾದ ವ್ಯಕ್ತಿಯಿಂದ ಲಕ್ಷಾಂತರ ಹಣ ವಶ

IMG-20230327-WA0044
Published on

ಕಾರವಾರ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ 5 ಲಕ್ಷ ರೂ.‌ಹಣವನ್ನು ಶಹರ ಠಾಣೆ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಗೋವಾ ಕಾಣಕೋಣದ ಲಕ್ಷ್ಮಣ ಸಿಂಗ್ ಎಂಬಾತ ಕಾರಿನಲ್ಲಿ‌ ಸಾಗಿಸುತ್ತಿದ್ದ ಹಣವನ್ನು ವಶಕ್ಕೆ‌ ಪಡೆಯಲಾಗಿದೆ. ಹಣ ಮೀನು ಖರೀದಿಸಲು ತಂದಿದ್ದು ಎಂದು ಒಮ್ಮೆ, ಬ್ಯಾಂಕ್ ಗೆ ತುಂಬಲು ತಂದಿದ್ದು ಎಂದು ಇನ್ನೊಮ್ಮೆ ಗೊಂದಲಮಯ ಹೇಳಿಕೆ ನೀಡುತ್ತಿದ್ದಾನೆ. ಆತನಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದ್ದು, ಹಣಕ್ಕೆ ದಾಖಲೆ ಒದಗಿಸಿದರೆ, ಅದನ್ನು ಬಿಡುಗಡೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಗರ ಕವಚ ಫಲ: ಸಾಗರ ಕವಚ ಎಂಬ ಜಂಟಿ ಅಣಕು ಕಾರ್ಯಾಚರಣೆಯನ್ನು ಕರಾವಳಿಯ ರಕ್ಷಣಾ ಇಲಾಖೆಗಳು ಸೋಮವಾರ ನಡೆಸಿವೆ. ಭಯೋತ್ಪಾದಕರ ದಾಳಿಯಾದಲ್ಲಿ ಕರಾವಳಿಯ ರಕ್ಷಣಾ ದಳಗಳು ಪರಸ್ಪರ ಸಹಕಾರದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಾಚರಣೆ ಪ್ರತಿ ಮೂರು ತಿಂಗಳಿಗೆ ನಡೆಯಲಿದೆ. ನೌಕಾಸೇನೆ, ಕೋಸ್ಟ್ ಗಾರ್ಡ್, ಕರಾವಳಿ ಕಾವಲುಪಡೆ ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ಕಲ್ಪಿತ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವರು. ರೆಡ್ ಫೋರ್ಸ್ ಹೆಸರಿನ ಅಧಿಕಾರಿಗಳು ಭಯೋತ್ಪಾದಕರ ಮಾರು ವೇಷದಲ್ಲಿ ಬರುವರು. ರಕ್ಷಣಾ ಸಿಬ್ಬಂದಿ ಅವರನ್ನು ಹಿಡಿಯುವ ಟಾಸ್ಕ್ ಇರಲಿದೆ.‌

ಸೋಮವಾರ ಕಲ್ಪಿತ ಕಾರ್ಯಾಚರಣೆಯ ಅಂಗವಾಗಿ ಎಲ್ಲೆಡೆ‌ ಬಿಗಿ ಭದ್ರತೆ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ, ಕಚೇರಿ, ಬಂದರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ‌ ವಾಹನ ತಪಾಸಣೆ ನಡೆಸಲಾಗಿತ್ತು.‌ ಈ ಸಂದರ್ಭದಲ್ಲಿ ಕಾಳಿ ಬ್ರಿಜ್ ಸಮೀಪ ತಪಾಸಣೆ ವೇಳೆ ಅಕ್ರಮ ಹಣ ಪತ್ತೆಯಾಗಿದೆ‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net