ಅಕ್ರಮವಾಗಿ ಮದ್ಯ ಮಾರುತ್ತಿದ್ದವನ ಬಂಧನ

Published on

ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿ ನರಸೀಪುರ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಯುವಕನನ್ನು ಮಹಿಳೆಯರು ಹಿಡಿದು ಅಬಕಾರಿ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.


ಗ್ರಾಮದ ಪುಟ್ಟರಾಜು ಸಿಕ್ಕಿಬಿದ್ದವ. ಈತ ಕೆಲ ದಿನಗಳಿಂದ ಮದ್ಯದ ಸ್ಯಾಚೆಟ್‌ಗಳನ್ನು ಚೀಲದಲ್ಲಿ ತುಂಬಿಕೊಂಡು ತಂದು ಗ್ರಾಮದಲ್ಲಿ ಮಾರಾಟ ಮಾಡುತ್ತಿದ್ದ. ಕುಡುಕರ ಹಾವಳಿಯಿಂದ ರೋಸಿ ಹೋಗಿದ್ದ ಗ್ರಾಮದ ಮಹಿಳೆಯರು ಹೇಗಾದರೂ ಮಾಡಿ ಈತನನ್ನು ಮಾಲು ಸಮೇತ ಹಿಡಿದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ನೀಡಬೇಕು ಎಂದು ನಿರ್ಧರಿಸಿದ್ದರು.


ಸೋಮವಾರ ಮದ್ಯ ಅಕ್ರಮ ಮಾರಾಟದಲ್ಲಿ ತೊಡಗಿದ್ದನ್ನು ಕಂಡ ಗ್ರಾಮದ ಮಹಿಳೆಯರು ಆತನನ್ನು ಹಿಡಿದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಆತನನ್ನು ಬಂಧಿಸಿ, ಮದ್ಯದ ಸ್ಯಾಚೆಟ್‌ಗಳನ್ನು ವಶಕ್ಕೆ ಪಡೆದರು. ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net