

ಪಿರಿಯಾಪಟ್ಟಣ: ಫಲಾನುಭವಿಗಳಿಂದ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಖರೀದಿಸಿ ಕಾಳಸಂತೆ ಯಲ್ಲಿ ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯನ್ನು ಬಂಧಿಸಿರುವ ಆಹಾರ ಇಲಾಖೆಯ ಸಿಬ್ಬಂದಿ ಸುಮಾರು 681 ಕೆಜಿ ಅಕ್ಕಿಯನ್ನು ವಾಹನ ಸಮೇತ ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಅಸ್ವಾಳು ಗ್ರಾಮದ ಸಯ್ಯದ್ ಅಸ್ಲಾಂ ಬಂದಿತ ವ್ಯಕ್ತಿ. ಶುಕ್ರವಾರ ವಿವಿಧ ಗ್ರಾಮಗಳ ಫಲಾನುಭವಿಗಳಿಂದ ಅಕ್ಕಿ ಖರೀದಿಸಿ ತಾಲೂಕಿನ ವಿ.ಜಿ.ಕೊಪ್ಪಲು -ರಾವಂದೂರು ರಸ್ತೆಯಲ್ಲಿ ವಾಹನದಲ್ಲಿ ಕೊಂಡೊಯ್ಯುತ್ತಿದ್ದಾಗ ಆಹಾರ ಇಲಾಖೆಯ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ವಾಹನ ಮತ್ತು 14 ಚೀಲ ಅಕ್ಕಿಯನ್ನು ಆರೋಪಿಯಿಂದ ವಶಪಡಿಸಿಕೊಂಡು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಶಿರಸ್ತೇದಾರ್ ಸಣ್ಣಸ್ವಾಮಿ ಮತ್ತು ಸಿಬ್ಬಂದಿ ಇದ್ದರು.