

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠಕ್ಕೆ ತೆರಳುವ ಊರ ಬಸಪ್ಪನ ಒಡ್ಡುವಿನ ಮನೆಯೊಂದರಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಮದ್ಯವನ್ನು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದು, ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಮ.ಬೆಟ್ಟದ ಊರ ಬಸಪ್ಪನ ಒಡ್ಡುವಿನ ರಾಚಪ್ಪ, ಇವರ ಸಹೋದರಿ ಲಕ್ಷ್ಮೀ ಹಾಗೂ ಭದ್ರಮ್ಮ ಪರಾರಿಯಾಗಿದ್ದಾರೆ. ಪುಷ್ಪ ಎಂಬುವರ ಮನೆಯನ್ನು ಬಾಡಿಗೆಗೆ ಪಡೆದಿದ್ದು, ಇಲ್ಲಿ ಅಕ್ರಮವಾಗಿ ಮದ್ಯವನ್ನು ಸಂಗ್ರಹಿಸಿ ಭಕ್ತರಿಗೆ ಹಾಗೂ ಸ್ಥಳೀಯರಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್ ಜಗದೀಶ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿಯೊಂದಿಗೆ ರಾತ್ರಿ 11ರ ವೇಳೆಯಲ್ಲಿ ಮನೆಯ ಮೇಲೆ ದಾಳಿ ಮಾಡಿ ಕಾರ್ಯಾಚರಣೆ ನಡೆಸಿದಾಗ 14 ಬಾಕ್ಸ್‌ಗಳಲ್ಲಿದ್ದ 66,240 ರೂ. ಮೌಲ್ಯದ 90 ಎಂಎಲ್‌ನ 1,344 ಮದ್ಯದ ಪೌಚ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಮ.ಬೆಟ್ಟದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಶಿವಮೂರ್ತಿನಾಯಕ್, ರಮೇಶ್‌ಕುಮಾರ್, ಮಹೇಶ್ ಭಾಗವಹಿಸಿದ್ದರು.