

ಗುಡಿಬಂಡೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಿರುಮಲನಗರದ ರಾಜಕಾಲುವೆ ಮೇಲೆ ಖಾಸಗಿ ವ್ಯಕ್ತಿಗಳು ಮನೆ ನಿರ್ಮಾಣ ಮಾಡಲು ಅಡಿಪಾಯ ಹಾಕುತ್ತಿದ್ದರೂ ಪಪಂ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಪಟ್ಟಣದ ನಿವಾಸಿಗಳು ಆರೋಪಿಸಿದ್ದಾರೆ.
ಚರಂಡಿ ನೀರು ಸರಾಗವಾಗಿ ಹರಿಯಲು ಸರ್ಕಾರದ ಅನುದಾನದಲ್ಲಿ ತಿರುಮಲನಗರದಲ್ಲಿ ರಾಜಕಾಲುವೆ ನಿರ್ಮಾಣ ಮಾಡಲಾಗಿದೆ. ಆದರೆ, ಕೆಲವರು ರಾಜಕಾಲುವೆಯ ಮೇಲೆ ಮನೆ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಪಪಂ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಈಗಾಗಲೇ ಸರ್ಕಾರಿ ಆಸ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಇ-ಖಾತೆಗಳನ್ನು ರಾಜಾರೋಷವಾಗಿ ಮಾಡಿಕೊಡಲಾಗುತ್ತಿದೆ. ಸಾರ್ವಜನಿಕರು ಪ್ರಶ್ನಿಸುತ್ತಿದ್ದರೂ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಇನ್ನು ಪಪಂ ಸದಸ್ಯರಂತೂ ಇದನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಸರ್ಕಾರಿ ಆಸ್ತಿ ರಕ್ಷಿಸಬೇಕಾದವರು ಮೌನಕ್ಕೆ ಜಾರಿದ್ದು, ಇನ್ನು ರಕ್ಷಿಸುವವರು ಯಾರು ಎಂಬ ಪ್ರಶ್ನೆ ಜನರದ್ದು.
ರಾಜಾರೋಷವಾಗಿ ಅಡಿಪಾಯ
ಈಗಾಗಲೇ ರಾಜಕಾಲುವೆ ಮೇಲೆ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗುತ್ತಿದೆ. ತಿರುಮಲ ನಗರದ ಪ್ರಭಾವಿಯೊಬ್ಬರು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪವಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಮನೆಗಳಿಗೆ ನೀರು
ರಾಜಕಾಲುವೆಗಳನ್ನು ಮುಚ್ಚಿ ಮನೆ ನಿರ್ಮಾಣ ಮಾಡಿದರೆ ಮುಂದಿನ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ ರಾಜಕಾಲುವೆ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಎಚ್ಚೆತ್ತು ಆಕ್ರಮ ನಿರ್ಮಾಣವನ್ನು ತೆರವುಗೊಳಿಸಿ, ರಾಜಕಾಲುವೆ ಉಳಿಸಬೇಕೆಂದು ಪಟ್ಟಣದ ಜನತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
"ರಾಜಕಾಲುವೆ ಮೇಲೆ ಮನೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಅವರಿಗೆ ನೋಟಿಸ್ ನೀಡಿದ್ದೇವೆ. ಆದರೆ, ಅದರ ಪಕ್ಕದಲ್ಲಿಯೇ ಇನ್ನು ಕೆಲವರು ಮನೆ ನಿರ್ಮಾಣ ಮಾಡುತ್ತಿರುವ ಬಗ್ಗೆಯೂ ಮಾಹಿತಿ ಬಂದಿದ್ದು, ಯಾರು ಅಡಿಪಾಯ ಹಾಕಿದ್ದಾರೆಂದು ಗುರುತಿಸಿ ಅವರಿಗೆ ನೋಟಿಸ್ ನೀಡಿ, ಅಡಿಪಾಯ ತೆರವುಗೊಳಿಸಲಾಗುವುದು." - ಸಬಾ ಶಿರೀನ್, ಪಪಂ ಮುಖ್ಯಾಧಿಕಾರಿ, ಗುಡಿಬಂಡೆ "ತಿರುಮಲ ನಗರದ ರಾಜಕಾಲುವೆ ಮೇಲೆ ಅಕ್ರಮವಾಗಿ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತಿದ್ದರೂ ಪಪಂ ಅಧಿಕಾರಿಗಳು ಮೌನವಾಗಿದ್ದಾರೆ. ಈಗಾಗಲೇ ಪಪಂ ಮತ್ತು ತಹಸೀಲ್ದಾರ್‌ಗೆ ದೂರು ನೀಡಿದ್ದೇನೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮವಾಗಿ ನಿರ್ಮಾಣ ತೆರವು ಗೊಳಿಸಬೇಕು.' - ಸತೀಶ್ ಬಾಬು, ಗುಡಿಬಂಡೆ