

ರಾಣೆಬೆನ್ನೂರ: ಎಲ್ಲ ಹಂತದ ಅಧಿಕಾರಿಗಳು ಗ್ರಾಪಂ ಚುನಾವಣೆಯಲ್ಲಿ ಬಿಜಿಯಾಗಿದ್ದಾರೆ. ಇದನ್ನೇ ವರದಾನ ಮಾಡಿಕೊಂಡ ಅಕ್ರಮ ಮರಳು ದಂಧೆಕೋರರು ತಾಲೂಕಿನ ತುಂಗಭದ್ರಾ ನದಿಯಿಂದ ರಾತ್ರೋರಾತ್ರಿ ಮರಳು ಲೂಟಿ ಮಾಡುತ್ತಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂತೆ ತಾಲೂಕಿನ ಹರನಗಿರಿ, ಚಂದಾಪುರ ಗ್ರಾಮಗಳ ಬಳಿ ತುಂಗಭದ್ರಾ ನದಿಯಿಂದ ರಾತ್ರಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ, ಟಿಪ್ಪರ್ಗಳನ್ನು ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಳೆ ಕಡಿಮೆ ಆಗಿರುವುದರಿಂದ ತುಂಗಭದ್ರಾ ನದಿ ಪಾತ್ರದಲ್ಲಿ ನೀರಿನ ಹರಿವೂ ತಗ್ಗಿದೆ. ಹೀಗಾಗಿ, ಜೆಸಿಬಿ ಮೂಲಕ ಮರಳು ತುಂಬಲು ದಂಧೆಕೋರರಿಗೆ ಇನ್ನೂ ಅನುಕೂಲವಾಗಿದೆ. ಅಲ್ಲದೆ, ಅಧಿಕಾರಿಗಳು ಚುನಾವಣೆ ಕಾರ್ಯದಲ್ಲಿ ನಿಗಾ ವಹಿಸಿರುವುದರಿಂದ ನದಿಪಾತ್ರಕ್ಕೆ ಯಾರೂ ಬರುವುದಿಲ್ಲ ಎಂಬ ಧೈರ್ಯ ದಂಧೆಕೋರರದ್ದು. ಹೀಗಾಗಿ, ಮರಳು ಅಕ್ರಮ ಸಾಗಣೆ ಎಗ್ಗಿಲ್ಲದೆ ನಡೆದಿದೆ.
ತಾಲೂಕಿನ ಕುಮಾರಪಟ್ಟಣ, ಮಾಕನೂರ, ನಲವಾಗಿಲ, ಚಂದಾಪುರ, ಹರನಗಿರಿ ಸೇರಿ ವಿವಿಧೆಡೆ ನಿತ್ಯವೂ ರಾತ್ರಿ ಮರಳು ಲೂಟಿ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕೂಡಲೆ ಅಕ್ರಮವಾಗಿ ಮರಳು ಸಾಗಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಅಕ್ರಮವಾಗಿ ಮರಳು ಸಾಗಣೆ ಬಗ್ಗೆ ಆಯಾ ಗ್ರಾಮಗಳ ಜನ ತಕ್ಷಣಕ್ಕೆ ಮಾಹಿತಿ ನೀಡಿದರೆ ದಂಧೆಕೋರರನ್ನು ಹಿಡಿಯಲು ಅನುಕೂಲವಾಗುತ್ತದೆ. ಚುನಾವಣೆ ಬಂದೋಬಸ್ತ್ ಜತೆಗೆ ನದಿಪಾತ್ರಗಳ ಗ್ರಾಮಗಳ ಬಳಿ ಗಸ್ತು ತಿರುಗಲು ಸಿಬ್ಬಂದಿಗೆ ಸೂಚಿಸಲಾಗುವುದು. | ಟಿ.ವಿ. ಸುರೇಶ, ಡಿವೈಎಸ್ಪಿ