

ಕಾರವಾರ Illegal sand mining: ಜಿಲ್ಲೆಯಲ್ಲಿ ಅಧಿಕೃತ ಮರಳು ಗಣಿಗಾರಿಕೆ ಸ್ಥಗಿತವಾಗಿ ಏಳು ತಿಂಗಳು ಕಳೆದಿದೆ. ಆದರೆ, ಅಕ್ರಮ ಮರಳು ಗಣಿಗಾರಿಕೆ ವ್ಯಾಪಕವಾಗಿದ್ದು, ಅದನ್ನು ತಡೆಯಬೇಕು ಎಂದು ಸ್ವತಃ ಉತ್ತರ ಕನ್ನಡ ಜಿಲ್ಲಾ ಮರಳು ಕಾರ್ಮಿಕರ ಸಂಘ ದೂರು ನೀಡಿದೆ. ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರನ್ನು ಬುಧವಾರ ಭೇಟಿಯಾದ ಸಂಘದ ಪದಾಧಿಕಾರಿಗಳು, ಶೀಘ್ರ ಅಧಿಕೃತ ಮರಳು ಗಣಿಗಾರಿಕೆ ಪ್ರಾರಂಭಿಸಬೇಕು ಮತ್ತು ಅನಧಿಕೃತ ಮರಳು ಗಣಿಗಾರಿಕೆ (Illegal sand mining) ಯನ್ನು ತಡೆಯಬೇಕು ಎಂದು ಒತ್ತಾಯಿಸಿದರು. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಎನ್‌ಜಿಟಿ ಆದೇಶದಂತೆ ಜಿಲ್ಲಾಡಳಿತ ಜಿಲ್ಲಾದ್ಯಂತ ಅಧಿಕೃತ ಮರಳು ಗಣಿಗಾರಿಕೆಯನ್ನು ಮೇ ತಿಂಗಳಿಂದ ಸ್ಥಗಿತ ಮಾಡಿದೆ. ಕಾಳಿ, ಗಂಗಾವಳಿ, ಅಘನಾಶಿನಿ ಹಾಗೂ ಶರಾವತಿ ನದಿಗಳ ಪಾತ್ರದಲ್ಲಿ ಇದೇ ಉದ್ಯೋಗವನ್ನು ಸಾಂಪ್ರದಾಯಿಕವಾಗಿ ನಂಬಿಕೊಂಡಿರುವ ಕಾರ್ಮಿಕರು, ದೋಣಿ ಕಾರ್ಮಿಕರು, ಹಾಗೂ ವಾಹನ ಚಾಲಕರು, ಹಾಗೂ ಮಾಲೀಕರಿಗೆ ಸಮರ್ಪಕ ಉದ್ಯೋಗ ಇಲ್ಲದಂತಾಗಿದೆ. ಕುಟುಂಬಸ್ಥರ ಪರಿಸ್ಥಿತಿ ಶೋಚನೀಯವಾಗಿದೆ. ಮರಳು ಸಾಗಿಸುವ ವಾಹನಗಳ ಸಾಲವನ್ನು ಪಾವತಿಸಲಾಗದೇ ಮಾಲೀಕರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ.
ಆದರೆ, ಅನಧಿಕೃತ ಮರಳು ಗಣಿಗಾರಿಕೆ ಜಿಲ್ಲೆಯಲ್ಲಿ ಬಂದ್ ಆಗಿಲ್ಲ. ಸರ್ಕಾರಕ್ಕೆ ರಾಜಧನ ವಂಚಿಸಿ, ಅಕ್ರಮ ಮರಳು ಸಾಗಣೆ ಮಾಡುತ್ತಿರುವ ಪ್ರಕ್ರಿಯೆ ಜಿಲ್ಲೆಯಾದ್ಯಂತ ನಡೆದಿದೆ. ಹೊರ ಜಿಲ್ಲೆಗಳಿಗೂ ಮರಳು ರವಾನೆಯಾಗುತ್ತಿದೆ. ಚೆಕ್ ಪೋಸ್ಟ್ಗಳಿದ್ದರೂ ಈ ಪ್ರಕ್ರಿಯೆ ಸ್ಥಗಿತವಾಗದೇ ಇರುವುದು ಅಚ್ಚರಿಯಾಗಿದೆ. ಅಕ್ರಮ ಮರಳುಗಾರಿಕೆಯನ್ನು ತಡೆಯಬೇಕು.
ಅಲ್ಲದೇ, ಜಿಲ್ಲಾಡಳಿತದಿಂದ ಎನ್‌ಜಿಟಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಮರಳು ಗಣಿಗಾರಿಕೆಗೆ ಇರುವ ನಿರ್ಬಂಧವನ್ನು ಶೀಘ್ರ ತೆರವು ಮಾಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಎಸಿ ಕನಿಷ್ಕ ಇದ್ದರು. ಸಂಘಟನೆಯ ಅಧ್ಯಕ್ಷ ದಿಗಂಬರ ಶೇಟ್, ಪ್ರಮುಖರಾದ ವಿನೋದ ನಾಯ್ಕ, ನಿತ್ಯಾನಂದ ನಾಯಕ, ಪ್ರದೀಪ ವೈಂಗಣಕರ್, ವಿವೇಕ ಜಿ.ಕಲ್ಗುಟಕರ್, ಚಂದ್ರಹಾಸ ನಾಯ್ಕ ಇತರರು ಇದ್ದರು.