

ಶಿರಸಿ: ವಿಧಾನಸಭೆ ಅಧಿವೇಶನದಲ್ಲಿ ಆಳುವ ಮತ್ತು ವಿರೋಧ ಪಕ್ಷಗಳು ಸಮರ್ಪಕ, ಅರ್ಥಪೂರ್ಣ ಚರ್ಚೆ ನಡೆಸುತ್ತಿಲ್ಲ. ಒಬ್ಬರ ಮೇಲೊಬ್ಬರು ದೋಷಾರೋಪ ಮಾಡುತ್ತ, ಪೊಳ್ಳು ಹೇಳಿಕೆ ನೀಡುವುದರಲ್ಲೇ ಮಗ್ನರಾಗಿ ಹೊಂದಾಣಿಕೆಯ ರಾಜಕಾರಣ ನಡೆಸುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಟೀಕಿಸಿದರು.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರಕ್ಕೆ ಗುರುವಾರ ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಎಲ್ಲ ಪಕ್ಷಗಳೂ ಜನರನ್ನು ಮಂಗನನ್ನಾಗಿ ಮಾಡಲು ಏನೇನು ಬೇಕೋ ಅದನ್ನು ಮಾಡುತ್ತಿವೆ ಎಂದು ಹೇಳಿದರು.
ಸರ್ಕಾರ ಗ್ಯಾರಂಟಿ ಯೋಜನೆ ನೀಡಿ ಅಭಿವೃದ್ಧಿ ಕಾರ್ಯಕ್ಕೆ ಹಣವಿಲ್ಲದ ಸ್ಥಿತಿ ತಂದುಕೊಂಡಿದೆ. ನೌಕರರ ವೇತನ ಹಾಗೂ ಗ್ಯಾರಂಟಿಗಾಗಿ ಮಾತ್ರ ಸರ್ಕಾರದ ವಾರ್ಷಿಕ ಬಜೆಟ್ ಖರ್ಚಾಗುತ್ತಿದೆ. ಇದರ ಪರಿಣಾಮವಾಗಿ ರಾಜ್ಯದ ಎಲ್ಲೂ ರಸ್ತೆಗೆ ಒಂದು ಹಿಡಿ ಟಾರ್ ಹಾಕಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿರುವ 24 ಸಾವಿರ ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಣವನ್ನು ಗ್ಯಾರಂಟಿಗಾಗಿ ಬಳಸುತ್ತಿದ್ದಾರೆ. ಈ ರೀತಿ ಮಾಡಿದರೆ ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿ ಹೇಗೆ ಸಾಧ್ಯ? ಇಂತಹ ಘಟನೆಗಳು, ಅಭಿವೃದ್ಧಿ ಶೂನ್ಯವಾದ ಲೋಪವನ್ನು ಮುಚ್ಚಿಕೊಳ್ಳುವ ಸಲುವಾಗಿ ರಾಜ್ಯದ ಜನತೆಯ ಗಮನ ಬೇರೆಡೆ ಸೆಳೆಯಲು ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದವರ ಪ್ರಕರಣ ವಾಪಸ್ ಪಡೆದುಕೊಂಡಿದ್ದಾರೆ. ನಂತರ ವಕ್ಫ್ ಹೆಸರಿನಲ್ಲಿ ರೈತರ ಭೂಮಿಗೂ ನೋಟಿಸ್ ನೀತೊಡಗಿದರು ಎಂದು ಆರೋಪಿಸಿದರು.
ರೈತರು ನೂರಾರು ವರ್ಷಗಳಿಂದ ಭೂಮಿಯನ್ನು ಉಳುಮೆ ಮಾಡಿಕೊಂಡು ಬಂದಿದ್ದಾರೆ. ನಿಯಮದ ಪ್ರಕಾರ, ಸರ್ಕಾರಿ ಭೂಮಿಯನ್ನು 30 ವರ್ಷ ರೈತ ಯಾರದ್ದೇ ತಕರಾರಿಲ್ಲದೆ ಉಳುಮೆ ಮಾಡಿಕೊಂಡು ಬಂದಿದ್ದರೆ ಅದನ್ನು ರೈತರಿಗೆ ಬಿಟ್ಟುಕೊಡಬೇಕಾಗುತ್ತದೆ. ಆದರೆ, ವಕ್ಫ್ಗೆ ಈ ಆಸ್ತಿಗಳೆಲ್ಲ ಎಲ್ಲಿಂದ ಬಂದವು ಎಂಬುದನ್ನೂ ನಾವು ಗಮನಿಸಬೇಕಿದೆ. ಟ್ರಸ್ಟ್ ಗೆ ನೀಡಿದ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಇಂದು ವಕ್ಫ್ ಆಸ್ತಿಯಲ್ಲಿ ವಾಣಿಜ್ಯ ಭೂಮಿ, ಹೋಟೆಲ್ಗಳು ನಿರ್ಮಾಣಗೊಂಡಿವೆ. ಫೊಟೋ ಆಡಿಟಿಂಗ್ ಮತ್ತು ವಾಣಿಜ್ಯಿಕ ಆಡಿಟಿಂಗ್ ಮಾಡಿದರೆ ಇಂತಹ ದುರ್ಬಳಕೆ ಮಾಡಿಕೊಂಡ ಪ್ರಕರಣಗಳೆಲ್ಲ ಹೊರಗೆ ಬರುತ್ತವೆ. ಇದನ್ನು ಖರ್ಗೆ, ಖಮರುಲ್ ಇಸ್ಲಾಂ, ರೆಹಮಾನ್ ಖಾನ್ ಗಮನಿಸಬೇಕು. ಈ ರೀತಿ ವಕ್ಫ್ ಆಸ್ತಿಯ ದುರ್ಬಳಕೆಯಿಂದ ಮುಸಲ್ಮಾನರಿಗೂ ಲಾಭವಿಲ್ಲ. ಆದರೆ, ಅವರ ಹೆಸರಿನಲ್ಲಿ ಭೂಮಿಯನ್ನು ಕಬಳಿಸುವ ದಂಧೆ ನಡೆಯುತ್ತಿದೆ. ಇಂತಹ ಮೋಸದ ವಿರುದ್ಧ ನಾವು ನಿಲ್ಲುತ್ತೇವೆ. ಮುಸ್ಲಿಮರು ಯಾರಿಂದ ಈ ಭೂಮಿಯನ್ನು ಪಡೆಯುತ್ತಿದ್ದಾರೆ ಎಂಬುದನ್ನು ಮೊದಲು ಬಹಿರಂಗಪಡಿಸಬೇಕು ಎಂದು ಹೇಳಿದರು.
ಇಸ್ಲಾಂ ಭಾರತದಲ್ಲಿ ಹುಟ್ಟಿದ ಧರ್ಮವಲ್ಲ. ಕ್ರಿಶ್ಚಿಯನ್ ಧರ್ಮ ಸಹ ಭಾರತದ್ದಲ್ಲ. ಮರುಭೂಮಿಯಲ್ಲಿ ಹುಟ್ಟಿ ಭಾರತಕ್ಕೆ ಬಂದು ಆಶ್ರಯ ಪಡೆದ ಧರ್ಮಗಳು ಇವು. ಅವರಿಗೆ ಈ ವಕ್ಫ್ ಭೂಮಿ ಎಲ್ಲಿಂದ ಬಂತು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರವು ಅಬಕಾರಿ ಆದಾಯವನ್ನು 38 ಸಾವಿರ ಕೋಟಿ ರೂ.ಗೆ ಹೆಚ್ಚಿಸಿಕೊಂಡಿದೆ. ಮಹಿಳೆಯರಿಗೆ 2 ಸಾವಿರ ರೂ. ಕೊಟ್ಟು, ಗಂಡಸರಿಂದ ಹಣ ಕಿತ್ತುಕೊಳ್ಳುತ್ತಿದ್ದಾರೆ. ಇದೊಂದು ರೀತಿಯಲ್ಲಿ ಮನೆ ಹಾಳು ಮಾಡುವ ಕಾರ್ಯ. ಸರ್ಕಾರದಿಂದ ಇದುವರೆಗೂ ಅಭಿವೃದ್ಧಿ ಆಗಿಲ್ಲ, ಮುಂದಿನ ಮೂರೂವರೆ ವರ್ಷವೂ ಅಭಿವೃದ್ಧಿ ಆಗುವುದಿಲ್ಲ.
ಪ್ರತಾಪ ಸಿಂಹ