ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ

FotoJet
Published on

ಸೂಕ್ತ ಕ್ರಮಕ್ಕೆ ನಲ್ಲಗುಟ್ಲಪಲ್ಲಿ ಗ್ರಾಮಸ್ಥರ ಆಗ್ರಹ ನಕಲಿ ದಾಖಲೆ ಸೃಷ್ಟಿಸಿ ಪಂಚಾಯಿತಿಯಿಂದ ಅನುಮತಿ ಪಡೆದ ಆರೋಪ

ಚೇಳೂರು: ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವ

ಬಗ್ಗೆ ಆರೋಪ ಕೇಳಿಬಂದಿದೆ.

ಚೇಳೂರು ತಾಲೂಕಿನ ಎಂ.ನಲ್ಲಗುಟ್ಲಪಲ್ಲಿ ಗ್ರಾಮದ ಸರ್ವೇ ನಂ.8ರಲ್ಲಿ 4 ಎಕರೆ 32 ಗುಂಟೆ ಸರ್ಕಾರಿ ಜಮೀನಿದ್ದು, ಕೆಲವರು ಪಂಚಾಯಿತಿಯಲ್ಲಿ ಅನುಮತಿ ಪಡೆಯದೆ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ.

ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಲ್ಲಗುಟ್ಲಪಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

"ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ನಿರ್ಮಾಣ ಮಾಡುತ್ತಿರುವವರ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು." - ರಮೇಶ್, ತಾಪಂ ಇಒ, ಬಾಗೇಪಲ್ಲಿ "ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿರುವ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ." - ಎನ್.ವಿ.ಪ್ರಸಾದ್‌ರೆಡ್ಡಿ, ಎಂ.ನಲ್ಲಗುಟ್ಲಪಲ್ಲಿ "ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಈ ನಡುವೆ ನನಗೆ ಬೇರೆ ಕಡೆಗೆ ವರ್ಗಾವಣೆಯಾಗಿದೆ." - ನಾರಾಯಣಸ್ವಾಮಿ, ಪಿಡಿಒ (ನಿರ್ಗಮಿತ), ಎಂ.ನಲ್ಲಗುಟ್ಲಪಲ್ಲಿ "ಎಂ.ನಲ್ಲಗುಟ್ಲಪಲ್ಲಿ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗವನ್ನು ಸ್ವಾಧೀನಪಡಿಸಿಕೊಂಡು ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇದು ಅಕ್ರಮವಾಗಿದ್ದು, ಕಟ್ಟಡ ನಿರ್ಮಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು." - ಬೈಯಾರೆಡ್ಡಿ, ಎಂ.ನಲ್ಲಗುಟ್ಲಪಲ್ಲಿ "ಹೊಸದಾಗಿ ಪಿಡಿಒ ಆಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ತಹಸೀಲ್ದಾರ್ ಹಾಗೂ ಸರ್ವೇ ಇಲಾಖೆ ಎಡಿಎಲ್‌ಆರ್ ಅವರಿಗೆ ಪತ್ರ ಬರೆದು ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು." - ವೆಂಕಟಾಚಲಪತಿ, ಪಿಡಿಒ, ನಲ್ಲಗುಟ್ಲಪಲ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net