

ಹಾಸನ: ಸಚಿವ ಪ್ರಿಯಾಂಕ್ ಖರ್ಗೆಗೆ ತಾಕತ್ತು, ಧಮ್ ಇದ್ದರೆ ಕರ್ನಾಟಕದಲ್ಲಿ ಅಕ್ರಮವಾಗಿ ಕಟ್ಟಿಕೊಂಡಿರುವ ಮದರಸ, ಮಸೀದಿಗಳನ್ನು ತೆರವು ಮಾಡಲಿ. ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸವಾಲು ಹಾಕಿದರು.
ಮಂಗಳವಾರ ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನಾತನ ಹಿಂದು ಧರ್ಮ, ಆರ್‌ಎಸ್‌ಎಸ್ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ. ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಷೇಧ ಮಾಡಲು ಅಧಿಕಾರವೇ ಇಲ್ಲ ಎಂದು ಕಿಡಿಕಾರಿದರು.
ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಶಾಖೆಯಲ್ಲಿ ದೇಶ ಭಕ್ತಿ, ದೇಶಕ್ಕಾಗಿ ಪ್ರಾಣಕೊಟ್ಟ ರಾಷ್ಟ್ರ ನಾಯಕರನ್ನು ಮತ್ತು ಸನಾತನ ಹಿಂದು ಧರ್ಮದ ಬಗ್ಗೆ ಶಿಕ್ಷಣ ನೀಡಲಾಗುತ್ತದೆ. ಇವರು ತಾಲಿಬಾನ್‌ಗಳ ಬಚ್ಚಾಗಳು. ಬಿ.ಕೆ.ಹರಿಪ್ರಸಾದ್, ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ತಾಲಿಬಾನ್ ಪರ ಮಾತನಾಡುವ ಚೇಲಾಗಳು. ಡಿ.ಕೆ.ಶಿವಕುಮಾರ್ ಮೊನ್ನೆ ಆರ್‌ಎಸ್‌ಎಸ್ ಟೋಪಿನಾ ಕರಿ ಟೋಪಿ ಎಂದಿದ್ದಾರೆ. ಜಮಿರ್ ಅಹಮದ್‌ಗೆ ಹೇ ಜಾವೀದ್ ಟೋಪಿ ಬಾ ಎನ್ನುವ ತಾಕತ್ ಇದೆಯಾ ಎಂದು ಪ್ರಶ್ನಿಸಿದರು.
400 ಮುಸ್ಲಿಂ ಪಿಎಸ್‌ಗೆ ಟ್ರೈನಿಂಗ್ ಕೊಡಲು ಉದ್ದೇಶಿಸಿದ್ದಾರೆ. ಜಮೀರ್ ಅಹಮದ್, ಸಿದ್ದರಾಮಯ್ಯ, ಡಿಜಿ, ಐಜಿಪಿ ಸೇರಿಕೊಂಡು ಕರ್ನಾಟಕವನ್ನು ಮುಸ್ಲಿಂ ರಾಜ್ಯ ಮಾಡಲು ಹೊರಟಿದ್ದಾರೆ. ಇದಕ್ಕೆ 2028ಕ್ಕೆ ಜನ ಉತ್ತರ ಕೊಡುತ್ತಾರೆ ಎಂದು ಗುಡುಗಿದರು.
ಪ್ರಿಯಾಂಕ್ ಖರ್ಗೆ ಅಂಬೇಡ್ಕರ್ ಶಿಷ್ಯರಲ್ಲ. ಸೋನಿಯಾಗಾಂಧಿ, ನೆಹರು ಮನೆತನದ ಶಿಷ್ಯರು. ನೆಹರು ಈ ದೇಶಕ್ಕೆ ಏನೂ ಕೊಟ್ಟಿಲ್ಲ. ಅಂಬೇಡ್ಕರ್ ಅವರ ಹೇಳಿಕೆಯಂತೆ ಭಗತ್‌ಸಿಂಗ್, ಸುಭಾಷ್ ಚಂದ್ರಬೋಸ್, ಚಂದ್ರಶೇಖರ್ ಆಜಾದ್‌ರಂತಹ ನಾಯಕರ ಭಯಕ್ಕೆ ಬ್ರಿಟಿಷರು ಓಡಿ ಹೋಗಿದ್ದಾರೆ. ನೆಹರು, ಗಾಂಧಿಯಿಂದ ಸ್ವಾತಂತ್ರೃ ಸಿಕ್ಕಿಲ್ಲ ಎಂದು ಹೇಳಿದರು.
ಹಿಂದು ಮತಗಳ ವಿಭಜನೆಯಾಗಬಾರದು: ನಾನು ಯಾವುದೇ ಪಕ್ಷದ ಜತೆ ಸೇರುವುದಿಲ್ಲ. ನಾನು ಪಕ್ಷ ಕಟ್ಟುವ ಮೂಲಕ ಹಿಂದುಗಳ ಮತ ವಿಭಜನೆಗೆ ಅವಕಾಶ ನೀಡಲ್ಲ. ನಾನು ಯಾವ ರಾಜಕೀಯ ಪಕ್ಷದ ಜತೆ ಹೋಗುವುದಿಲ್ಲ ಎಂದು ಯತ್ನಾಳ್ ಹೇಳಿದರು.
ಧರ್ಮ ಒಡೆಯಲು ಹೊರಟಿದ್ದಾರೆ: ವೀರಶೈವ ಬೇರೆ ಅಲ್ಲ, ಲಿಂಗಾಯತ ಬೇರೆ ಅಲ್ಲ. ಲಿಂಗಾಯತ ವೀರಶೈವ ಎಲ್ಲ ಒಂದೇ ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಬಣವಣ್ಣನ ಕಾಲದಲ್ಲಿ ಮೂಢನಂಬಿಕೆ, ಅಸ್ಪ್ಪಶ್ಯತೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ವಿರುದ್ಧ ಬಸವಣ್ಣ ಹೋರಾಟ ಮಾಡಿದ್ದಾರೆ. ಆದರೆ, ಬಸವಣ್ಣ ಲಿಂಗಾಯತ ಧರ್ಮ ಸ್ಥಾಪನೆ ಮಾಡಿಲ್ಲ. ಅನುಭವ ಮಂಟಪ ಕಟ್ಟಿದರು. ಅಲ್ಲಿ ದಲಿತ ಅಲ್ಲಮ ಪ್ರಭುಗಳು ಅಧ್ಯಕ್ಷ ಆಗಿದ್ದರು. ಎಲ್ಲ ಸಮುದಾಯದ ಪ್ರತಿನಿಧಿಗಳು ಅಲ್ಲಿದ್ದರು. ಸನಾತನ ಧರ್ಮದಲ್ಲಿ ಏನು ಬದಲಾವಣೆ ಆಗಬೇಕು ಚಿಂತನೆ ಮಾಡಿದ್ದರು. ಅಲ್ಲಿ ಅಕ್ಕಮಹಾದೇವಿ, ಹರಳಯ್ಯ ಎಲ್ಲ ಇದ್ದರು. ಬಸವಣ್ಣ ಯಾವ ವಚನದಲ್ಲೂ ಹಿಂದು ಸಮಾಜಕ್ಕೆ ಬೈದಿಲ್ಲ. ಕೆಲ ಸಿದ್ದರಾಮಯ್ಯ ಗ್ಯಾಂಗ್ ನಕಲಿ ಸ್ವಾಮೀಜಿಗಳನ್ನು ತಯಾರು ಮಾಡಿದ್ದಾರೆ. ಅವರೆಲ್ಲಾ ನಕ್ಸಲೈಟ್ಸ್. ಅವರು ಎಲ್ಲ ದೇವರ ಮೂರ್ತಿಗಳನ್ನು ಹೊಳೆಗೆ ಹಾಕಿ ಅಂತಾರೆ ಎಂದರು.
ಎಂ.ಬಿ.ಪಾಟೀಲ್ ಲಿಂಗಾಯತ, ಈಶ್ವರ್ ಖಂಡ್ರೆ ವೀರಶೈವ ಲಿಂಗಾಯತ, ಶಾಮನೂರು ಶಿವಶಂಕರಪ್ಪ ವೀರಶೈವ. ಎಂ.ಬಿ. ಪಾಟೀಲ್‌ಗೆ ಧರ್ಮ ಬೇಕಂತೆ. ಅದನ್ನು ತಗೊಂಡು ಏನು ಮಾಡ್ತಾರೋ ಗೊತ್ತಿಲ್ಲ. ಆದರೆ, ಇವರೆಲ್ಲ ಸೇರಿ ಧರ್ಮ ಒಡೆದು ತಮ್ಮ ಸಂಸ್ಥೆ ಉಳಿಸಿಕೊಳ್ಳಲು ಹೊರಟಿದ್ದಾರೆ. ದೊಡ್ಡ ದೊಡ್ಡ ಮೆಡಿಕಲ್ ಕಾಲೇಜು ಕಟ್ಟಿದ್ದಾರೆ. ಐದು ಜನರಿಗಾದರೂ ಉಚಿತ ಶಿಕ್ಷಣ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.