

ಮಾಗಡಿ: ಪಟ್ಟಣದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸಲಾಗುತ್ತಿರುವ ಮನೆಗಳನ್ನು ಪೂರ್ಣಗೊಳಿಸದೆ ಕೋಟ್ಯಂತರ ರೂ. ಅಕ್ರಮ ಎಸಗಿದ್ದಾರೆ ಎಂದು ಕರ್ನಾಟಕ ಯುವ ರಕ್ಷಣಾ ಸಮಿತಿ ಅಧ್ಯಕ್ಷ ಕುಮಾರ್ ಆರೋಪಿಸಿದರು.
ಪಟ್ಟಣದ ಸೋಮೇಶ್ವರ ಕಾಲನಿಯಲ್ಲಿ ಸ್ಲಂ ಬೋರ್ಡ್‌ನಿಂದ ನಿರ್ಮಿಸುತ್ತಿರುವ ಮನೆಗಳನ್ನು ಪರಿಶೀಲಿಸಿ ಮಾತನಾಡಿ, ಪಟ್ಟಣದ ತಿರುಮಲೆ, ಹೊಸ ಮಸೀದಿ, ಸೋಮೇಶ್ವರ ಕಾಲನಿ ವ್ಯಾಪ್ತಿಗಳಲ್ಲಿ ಬಡವರಿಗೆ 2018ರಲ್ಲಿ 504 ಮನೆಗಳು ಮಂಜೂರಾಗಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಅರ್ಹರು ಶಿಥಿಲವಾಗಿದ್ದ ಹಳೆಯ ಮನೆಗಳನ್ನು ತೆರವುಗೊಳಿಸಿ ಹೊಸಮನೆ ನಿರ್ಮಿಸಿಕೊಡಲು ತಲಾ 20 ಸಾವಿರ ರೂ. ನಂತೆ ಕೊಳಚೆ ನಿರ್ಮೂಲನಾ ಮಂಡಳಿಗೆ ನೀಡಿದ್ದಾರೆ. ಆದರೆ, 6 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ವಾಸಿಸುವ ಬಹುತೇಕರು ಬಡವರಾಗಿದ್ದು, ಬಾಡಿಗೆ ಮನೆಯಲ್ಲೆ ಜೀವನ ನಡೆಸುತ್ತಿದ್ದಾರೆ. ಮತ್ತಷ್ಟು ಮಂದಿಗೆ ಬಾಡಿಗೆ ಕಟ್ಟಲು ಸಾಧ್ಯವಾಗದೆ ಅರ್ಧದಷ್ಟು ಕಟ್ಟಿರುವ ಮನೆಯಲ್ಲೆ ಇರುವುದರಿಂದ ಮಳೆ ಬಂದರೆ ಮಳೆಯ ನೀರು ಮನೆಗೆ ಸೇರುತ್ತಿದೆ. ಕಿಟಕಿ, ಬಾಗಿಲು ಅಳವಡಿಸದೆ ಇರುವುದರಿಂದ ರಾತ್ರಿ ವೇಳೆ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಮನೆ ಪೂರ್ಣಗೊಳಿಸದೆ ನಿರ್ಲಕ್ಷಿಸುತ್ತಿದ್ದಾರೆ. ಇದರ ವಿರುದ್ಧ ಲೋಕಾಯುಕ್ತಕ್ಕೆ ಸಂಪೂರ್ಣ ದಾಖಲೆಯೊಂದಿಗೆ ದೂರು ನೀಡಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಫಲಾನುಭವಿ ಶ್ರೀನಿವಾಸ್ ಮಾತನಾಡಿ, 3 ಚದರದ ಮನೆ ನಿರ್ಮಿಸಿಕೊಡುವುದಾಗಿ ತಿಳಿಸಿದ್ದರು. ಐದೂವರೆ ಚದರಡಿ ಮನೆ ನಿರ್ಮಿಸಿಕೊಡುವಂತೆ ತಿಳಿಸಿ ಹೆಚ್ಚುವರಿಯಾಗಿ ಚೆಕ್ ಮೂಲಕ ಎರಡೂವರೆ ಲಕ್ಷ ರೂ. ನೀಡಲಾಗಿದೆ. ಆದರೂ ಮನೆ ಪೂರ್ಣಗೊಳಿಸಿಲ್ಲ ಎಂದು ಆರೋಪಿಸಿದರು.
ಪಾರ್ಶ್ವವಾಯು ಪೀಡಿತ ರಾಮಣ್ಣ ಮಾತನಾಡಿ, ಸರ್ಕಾರದಿಂದ ಮನೆ ನಿರ್ಮಿಸಿಕೊಡುತ್ತಾರೆ ಎಂದು ಕೂಲಿ ಮಾಡಿ ಕೂಡಿಟ್ಟ ಹಣವನ್ನು ನೀಡಿದರೂ ಮನೆ ಪೂರ್ಣಗೊಳಿಸಿಲ್ಲ. ಈ ಬಗ್ಗೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು.
ಸಂಘಟನೆ ಪದಾಧಿಕಾರಿಗಳಾದ ಕೆ.ವೆಂಕಟೇಶ್, ಯತೀಶ್, ಮಂಜುನಾಥ್, ಮನೋಹರ್, ವಿನಯ್, ಜಯಕುಮಾರು, ಹನುಮಂತರಾಜು ಇತರರು ಇದ್ದರು.
"ತಿರುಮಲೆ, ಹಳೇ ಮಸೀದಿ ಮೊಹಲ್ಲಾ ವ್ಯಾಪ್ತಿಯಲ್ಲಿ ಹಂತಹಂತವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ. ಕಾಮಗಾರಿಗೆ ಮತ್ತಷ್ಟು ವೇಗ ನೀಡಲಾಗುವುದು. ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ. ಸರ್ಕಾರದ ಆದೇಶದಂತೆ ಮನೆ ನಿರ್ಮಿಸಿಕೊಡಲು ಪ್ರತಿಯೊಬ್ಬರೂ 1 ಲಕ್ಷ ರೂ. ಡಿಡಿ ಕಟ್ಟಬೇಕು. ಯಾರೂ 5 ಸಾವಿರದ ಮೇಲೆ ಡಿಡಿ ಕಟ್ಟಿಲ್ಲ."
ಸಂಜಯ್ , ಎಇ, ಸ್ಲಂ ಬೋರ್ಡ್