ಅಧಿವೇಶನದಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿಕೆ: ವಕೀಲರ 10 ದಿನಗಳ ಹೋರಾಟ ಅಂತ್ಯ
ರಾಮನಗರ: ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಿದ ಆರೋಪದ ಹಿನ್ನೆಲೆಯಲ್ಲಿ ನಗರದ ಐಜೂರು ಪೊಲೀಸ್ ಠಾಣೆ ಪಿಎಸ್ಐ ಸಯ್ಯದ್ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಿರುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬುಧವಾರ ವಿಧಾನಸಭೆಯ ಅಧಿವೇಶನದಲ್ಲಿ ಹೇಳಿದರು.
ಜೊತೆಗೆ, ಇಡೀ ಘಟನೆಗೆ ಕಾರಣವಾದ ವಕೀಲ ಚಾನ್ ಪಾಷ ವಿರುದ್ಧ ಕ್ರಮದ ಭರವಸೆ ನೀಡಿದರು.
ಪಿಎಸ್ಐ ಅಮಾನತಿಗೆ ಪಟ್ಟು ಹಿಡಿದು ಕಳೆದ 10 ದಿನಗಳಿಂದ ವಕೀಲರು ನಡೆಸುತ್ತಿದ್ದ ಹೋರಾಟಕ್ಕೆ ಜಯ ದೊರೆತಿದೆ. ಸಚಿವರು ಈ ವಿಷಯವನ್ನು ಹೇಳುತ್ತಿದ್ದಂತೆ, ರಾಮನಗರದಲ್ಲಿ ಧರಣಿ ನಿರತ ವಕೀಲರು ಸಂಭ್ರಮಾಚರಿಸಿದರು.
40 ವಕೀಲರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಕೀಲರು ಸಂಘದ ಆವರಣದಲ್ಲಿ ಫೆ. 12ರಿಂದ ಪಿಎಸ್ಐ ಅಮಾನತಿಗಾಗಿ ಧರಣಿ ನಡೆಸಿದ್ದರು. ಕಳೆದ ಸೋಮವಾರದಿಂದ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದರು.
ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಂಡಿದ್ದ ಹೋರಾಟವು, ರಾಜ್ಯದ ಗಮನ ಸೆಳೆದಿತ್ತು. ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ವಕೀಲರ ಧರಣಿ ನಿರತ ವಕೀಲರನ್ನು ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಹೋರಾಟದ ವಿಷಯ ಪ್ರಸ್ತಾಪವಾಗಿ, ಪಿಎಸ್ಐ ಅಮಾನತಿಗೆ ಒತ್ತಡ ಕೇಳಿಬಂದಿತ್ತು. ಅಲ್ಲದೆ ಗುರುವಾರ ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ವಿಧಾನ ಸೌಧ ಚಲೋಗೆ ಕರೆ ನೀಡಲಾಗಿತ್ತು.
ಹೋರಾಟದ ಕಾವು ಹೆಚ್ಚುತ್ತಿರುವುದನ್ನು ಗಮನಿಸಿದ ಸಚಿವರು, ಕಡೆಗೂ ಪಿಎಸ್ಐ ತನ್ವೀರ್ ಅವರನ್ನು ಅಮಾನತು ಮಾಡಿ ಸದನದಲ್ಲಿ ಘೋಷಣೆ ಮಾಡಿದ್ದಾರೆ.