ಇಗ್ಗಲೂರು ಎನ್ನುವ ಪುರಾತನ ಗ್ರಾಮ

IMG-20240818-WA0008
Published on
ಅಭಿಲಾಷ್ ತಿಟ್ಟಮಾರನಹಳ್ಳಿ
ಚನ್ನಪಟ್ಟಣ
ತಾಲೂಕಿನ ಗಡಿಭಾಗದಲ್ಲಿರುವ ಇಗ್ಗಲೂರು ಹಲವಾರು ಕಾರಣಗಳಿಂದ ಗುರುತಿಸಿಕೊಂಡಿರುವ ವಿಶಿಷ್ಟ ಗ್ರಾಮ. ವಿಸ್ತಾರದಲ್ಲಿ ದೊಡ್ಡದಾಗಿರುವ ಈ ಗ್ರಾಮದ ಕೊಡುಗೆಯೂ ಸಹ ಅಷ್ಟೇ ವಿಸ್ತಾರವಾಗಿದೆ. ತಾಲೂಕಷ್ಟೇ ಅಲ್ಲದೇ ಈ ಭಾಗದ ನೀರಾವರಿಗೆ  ಮೊದಲ ಮೆಟ್ಟಿಲು ಎನ್ನುವ ಹೆಗ್ಗಳಿಕೆಯನ್ನು ಈ ಗ್ರಾಮ  ತನ್ನದಾಗಿಸಿಕೊಂಡಿದೆ.
ತಾಲೂಕು ಕೇಂದ್ರದಿಂದ 24 ಕಿಮೀ ದೂರವಿರುವ ಇಗ್ಗಲೂರು ಚನ್ನಪಟ್ಟಣ ತಾಲೂಕಿನ ಗಡಿಗ್ರಾಮವಾಗಿದ್ದು, ಪಕ್ಕದ ಮದ್ದೂರು ಹಾಗೂ ಮಳ್ಳವಳ್ಳಿ ತಾಲೂಕಿನ ಗಡಿ ಹಂಚಿಕೊಂಡಿದೆ‌. ಅರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ‌ರಾಜಕೀಯವಾಗಿಯೂ‌ ಗುರುತಿಸಿಕೊಂಡಿರುವ ಈ ಗ್ರಾಮ ತನ್ನದೇ ಆದ ಇತಿಹಾಸ ಹೊಂದಿದೆ. ಇದೊಂದು ಪುರಾತನವಾದ ಗ್ರಾಮವಾಗಿದ್ದು, ಐತಿಹಾಸಿಕವಾಗಿ ತನ್ನದೇ ಆದ ಹಲವು ಅಮೂಲ್ಯವಾದ ದಾಖಲೆಯನ್ನು ತನ್ನ ಒಡಲಿನಲ್ಲಿ ಬಚ್ಚಿರಿಸಿಕೊಂಡಿದೆ.

ಪುರಾತನ ಗ್ರಾಮ!

ಗ್ರಾಮದ ಪ್ರಾಚೀನ ಕಾಲದ ದೇವಾಲಯವಾದ ಬಸವೇಶ್ವರ ಸ್ವಾಮಿ ಕೊಂಡ ಮಹೋತ್ಸವದಲ್ಲಿ ಈ ಹಿಂದೆ ‌ಕೊಂಡ ಹಾಯಲು ಇದ್ದಿಲು ಬಳಸುತ್ತಿದರಂತೆ, ಈ ಹಿನ್ನೆಲೆಯಲ್ಲಿ ಈ ಗ್ರಾಮವನ್ನು ಇದ್ದಲೂರು ಎನ್ನಲಾಗುತಿತ್ತು.‌ ಕಾಲ ಕ್ರಮೇಣ ಅದೇ ಇಗ್ಗಲೂರಾಗಿದೆ ಎನ್ನಲಾಗಿದೆ. ಗ್ರಾಮದಲ್ಲಿರುವ ಗಂಗರು, ಚೋಳರು ಹಾಗೂ ವಿಜಯನಗರದರಸರ ಕಾಲದಲ್ಲಿನ ದೇವಾಲಯಗಳು ಹಾಗೂ ಇಲ್ಲಿರುವ‌ ಮಾಸ್ತಿಕಲ್ಲು, ವೀರಗಲ್ಲು ಹಾಗೂ ಶಿಲಾಶಾಸನಗಳು ಗ್ರಾಮದ ಗತ ಇತಿಹಾಸವನ್ನು ಸಾರಿ ಹೇಳುತ್ತವೆ.
ಇಲ್ಲಿನ ದೇವಸ್ಥಾನವೊಂದರ ಬಳಿ ಇರುವ‌ ಒಂದು ವೀರಗಲ್ಲು ಶಾಸನವೂ ಬುಕ್ಕರಾಯನ ಆಳ್ವಿಕೆ ಪ್ರಾರಂಭದ ಅವಧಿ ಮತ್ತು ಹರಿಯಪ್ಪ ಒಡೆಯರ್ ರವರ ಆಳ್ವಿಕೆಯ ಬಗ್ಗೆ ದಾಖಲೆಯನ್ನು ಒದಗಿಸಿದೆ. ಹಲವಾರು ರಾಜಮನೆತನಗಳ ಆಳ್ವಿಕೆಯನ್ನು ಕಂಡಿರುವುದು ಈ ಗ್ರಾಮದ ವಿಶೇಷ. ಇಲ್ಲಿನ ಮತ್ತೊಂದು ಶಾಸನವು ಹೊಯ್ಸಳ ಕಾಲಕ್ಕೆ ಸೇರಿದ್ದಾಗಿದ್ದು ಕ್ರಿ.ಶ.1176 ಪ್ರಕಾರ ಹಲವು ನಾಯಕರು ಯುದ್ಧದಲ್ಲಿ ಸತ್ತರೆಂಬ ವಿಚಾರವನ್ನು ತಿಳಿಸಿದೆ. ಒಂದು ಕಾಲದಲ್ಲಿ ಈ ಗ್ರಾಮ ರಾಜಕೀಯವಾಗಿ ಸಾಕಷ್ಟು ಮಹತ್ವ ಪಡೆದಿತ್ತು ಎನ್ನಲಾಗಿದ್ದು, ಮತ್ತೊಂದೆಡೆ, ಸುಮಾರು 1200 ವರ್ಷದ ಹಿಂದೆ ಮದ್ದೂರು ತಾಲೂಕಿನ ಹಾಗಲಹಳ್ಳಿ, ಹು
ಸ್ಕೂರು ಹಾಗೂ ಇಗ್ಗಲೂರು ಗ್ರಾಮವನ್ನು ಸವಿತಾ ಸಮಾಜದ ದೊರೆಯೊರ್ವ ಆಳುತ್ತಿದ್ದರು ಎನ್ನುವ ಇತಿಹಾಸವೂ ಸಹ ಈ ಗ್ರಾಮಕ್ಕಿದೆ.

ಧಾರ್ಮಿಕ ನೆಲೆವೀಡು!

ಗ್ರಾಮದಲ್ಲಿ ಪುರಾತನವಾದ ಸೋಮೇಶ್ವರ, ಶಂಭುಲಿಂಗೇಶ್ವರ, ಬಸವೇಶ್ವರ, ಆಂಜನೇಯಸ್ವಾಮಿ ದೇವಾಲಯಗಳಿವೆ. ಕೋಣನ ಮಾರಮ್ಮ ತಾಯಿ ಗ್ರಾಮದೇವತೆಯಾಗಿ ನೆಲೆಸಿದ್ದಾರೆ. ಈ ಹಿಂದೆ ಈ ದೇವರಿಗೆ ಕೋಣನ ಬಲಿಕೊಡುವ ಸಂಪ್ರದಾಯವಿತ್ತು. ಆದರೆ, ಕಾಲಕ್ರಮೇಣ ಅದು ನಿಷೇಧವಾಗಿದೆ. ಇದರೊಂದಿಗೆ, ಅಂತರಹಳ್ಳಿ ಸಿದ್ದೇಶ್ವರ, ದೇವಮ್ಮ, ಮಾರಮ್ಮ, ಗುಜ್ಜಮ್ಮ, ದೊಡ್ಡಮ್ಮ, ಚಿಕ್ಕಮ್ಮ ಸೇರಿದಂತೆ ಹಲವಾರು ದೇವಾಲಯಗಳಿವೆ. ಗ್ರಾಮದಲ್ಲಿ ಹಲವಾರು ಹಬ್ಬಹರಿದಿನಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ವರ್ಷಕೊಮ್ಮೆ ಗ್ರಾಮದ ಎಲ್ಲಾ ದೇವರುಗಳನ್ನು ಪಕ್ಕದ ಮಳ್ಳವಳ್ಳಿ ತಾಲೂಕಿನ ಅಂತರಹಳ್ಳಿ ಬೆಟ್ಟಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತದೆ. ಮೂರುದಿನಗಳ ಕಾಲ ಊರ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ
ಅದ್ದೂರಿ ಹಬ್ಬವನ್ನು ಗ್ರಾಮದ ಎಲ್ಲಾ ಜಾತಿ ಜನಾಂಗದವರು ಒಗ್ಗೂಡಿ ಆಚರಿಸುವುದು ವಿಶೇಷ ಎನ್ನುತ್ತಾರೆ ಗ್ರಾಮದ ಮುಖಂಡರಾದ ನಿರಾಂಜನಸ್ವಾಮಿ, ರೇಣುಕಾಪ್ರಸಾದ್ ಹಾಗೂ ಇಗ್ಗಲೂರು ಲೋಕೇಶ್.

ಮಂಡ್ಯ ನಂಟು.., ಈ ಭಾಗದ ತಾಯಿಬೇರು!!!

ಈ ಭಾಗದಲ್ಲಿ ಕೋಡಂಬಳ್ಳಿ ನಂತರ ಎರಡನೇ ವಾಣಿಜ್ಯಕೇಂದ್ರ ಎಂಬ ಹೆಗ್ಗಳಿಕೆಯನ್ನು ಈ ಗ್ರಾಮ ಹೊಂದಿದೆ. ಪ್ರಾಥಮಿಕದಿಂದ ಹಿಡಿದು ಪದವಿಪೂರ್ವವರೆಗೆ ಶೈಕ್ಷಣಿಕ ವ್ಯವಸ್ಥೆ ಇದೆ. ಪ್ರಾಥಮಿಕ ಆರೋಗ್ಯಕೇಂದ್ರ ಸೇರಿದಂತೆ ವಿವಿಧ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಸರ್ವ ಜನಾಂಗದವರು ಸಹಬಾಳ್ವೆಯಿಂದ ವಾಸಿಸುತ್ತಿರುವ ಈ ಗ್ರಾಮ ಅಕ್ಕಪಕ್ಕದ ಊರುಗಳಿಗೆ ತಾಯಿಬೇರು ಎನ್ನಬಹುದು. ಗ್ರಾಮ ಆರ್ಥಿಕವಾಗಿ ಸಮೃದ್ಧವಾಗಿದ್ದು, ಪಕ್ಕದ ಮಂಡ್ಯ ಜಿಲ್ಲೆಯ ಒಡನಾಟ ಹೆಚ್ಚಾಗಿದೆ. ಬೌಗೋಳಿಕವಾಗಿ ಚನ್ನಪಟ್ಟಣವಾದರೂ, ಭಾವನಾತ್ಮಕವಾಗಿ ಮಂಡ್ಯದೊಂದಿಗೆ ಬೆಸೆದುಕೊಂಡಿದೆ. ಇಲ್ಲಿನ ಜನರ ಭಾಷೆಯಲ್ಲೂ ಸಹ‌ ಮಂಡ್ಯ ಸೊಗಡು ಕಾಣಬಹುದು.

ನೀರಾವರಿ ಯೋಜನೆಗೆ ಮೊದಲ ಮೆಟ್ಟಿಲು!

ಈ ಭಾಗ ಸೇರಿದಂತೆ ಇಡೀ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಮೊದಲ ಮೆಟ್ಟಿಲು ಎಂಬ ಹೆಗ್ಗಳಿಕೆ ಗ್ರಾಮಕ್ಕಿದೆ. ಅದಕ್ಕೆ ಕಾರಣ ಗ್ರಾಮದಲ್ಲಿ ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಿರುವ ಎಚ್.ಡಿ.ದೇವೇಗೌಡ ಬ್ಯಾರೇಜ್. ಇಗ್ಗಲೂರು ಬಳಿ ಹರಿದುಹೋಗುತ್ತಿದ್ದ ಶಿಂಷಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಿ ಈ ಭಾಗವನ್ನು ಹಸಿರು ಮಾಡಿದ ಹೆಗ್ಗಳಿಕೆ ಮಾಜಿ ಪ್ರಧಾನಿಗಳದ್ದಾಗಿದೆ‌. ಇಗ್ಗಲೂರಿನಲ್ಲಿ 1996ರಲ್ಲಿ ಶಿಂಷಾ ನದಿಗೆ‌ ಕೇವಲ ಬ್ರೀಡ್ಜ್ ಅಷ್ಟೇ ಅಲ್ಲದೇ ಬ್ಯಾರೇಜ್ ಸಹ ನಿರ್ಮಾಣ ಮಾಡಿ, ತಾನು ಪ್ರಧಾನಮಂತ್ರಿಯಾಗಿದ್ದ ವೇಳೆ ಸ್ವತಃ ದೇವೇಗೌಡರೇ ಈ ಜಲಾಶಯದ ಉದ್ಘಾಟನೆ ನೇರವೇರಿಸುತ್ತಾರೆ. ಈ ಕಾರಣದಿಂದಲೇ ಈ ಜಲಾಶಯಕ್ಕೆ ಎಚ್.ಡಿ.ದೇವೇಗೌಡ ಬ್ಯಾರೇಜ್ ಎಂದೇ ಹೆಸರಿಡಲಾಗಿದೆ.
20 ಅಡಿ ಎತ್ತರದ ಈ ಬ್ಯಾರೇಜ್ 0.18 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ವಿಸ್ತೀರ್ಣದಲ್ಲಿ ಇದು ಚಿಕ್ಕದು ಎನಿಸಿದರೂ ಇದರ ಕೊಡುಗೆ ಮಾತ್ರ ಅನನ್ಯ. ಈ ಬ್ಯಾರೇಜ್ ನೀರು ಸಂಗ್ರಹದ ಜೊತೆಗೆ, ಜಿಲ್ಲೆಯ ನೀರಾವರಿ ಯೋಜನೆಗೆ ಮೊದಲ ಮೆಟ್ಟಿಲಾಗಿದ್ದು ಈಗ ಇತಿಹಾಸ. ಸಾವಿರಾರು ಎಕ್ಟೇರ್ ಭೂಮಿಗೆ ನೀರುಣಿಸುತ್ತಿರುವ ಕೀರ್ತಿ ಈ ಬ್ಯಾರೇಜಿಗಿದೆ. ತಾಲ್ಲೂಕಿನ ಗರಕಹಳ್ಳಿ ಏತ ನೀರಾವರಿ ಹಾಗೂ ಕಣ್ವ ಏತ ನೀರಾವರಿ ಯೋಜನೆಯನ್ನು ರೂಪಿಸಿ ತಾಲ್ಲೂಕಿನ ನೂರಾರು ಕೆರೆಗಳಿಗೆ ನೀರು ಹರಿಸಲು ಕಾರಣವಾಗಿದ್ದೆ ಈ ಜಲಾಶಯ. ಈ ಜಲಾಶಯ ಈ ಭಾಗಕ್ಕೆ ಜೀವಸೆಲೆಯಾಗಿದೆ‌. ಇಡೀ ಜಿಲ್ಲೆಯ ನೀರಾವರಿಗೆ ಯೋಜನೆಗೂ ಇದು ಮೊದಲ ಮೆಟ್ಟಿಲು ಎನ್ನುವುದು ನಮ್ಮ ಗ್ರಾಮದ ಹೆಮ್ಮೆ ಎನ್ನುತ್ತಾರೆ ಗ್ರಾಮದ ಮುಖಂಡರಾದ ಇ.ತಿ.ಶ್ರೀನಿವಾಸ್ ಮತ್ತು ಡಿಎಂಕೆ ಕುಮಾರ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net