ಅನುದಾನ ಕೊಟ್ಟರೆ ದೀರ್ಘದಂಡ ನಮಸ್ಕಾರ

web 111
Published on

ಶಾಸಕ ಎಚ್.ಸಿ.ಬಾಲಕೃಷ್ಣ ಸವಾಲು
ಗಟ್ಟೀಪುರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ

ಮಾಗಡಿ: ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ. ಕೊಡಿಸಿದರೆ ಸಂಸದಗೆ ದೀರ್ಘದಂಡ ನಮಸ್ಕಾರ ಹಾಕುತ್ತೇನೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಸವಾಲು ಹಾಕಿದರು.
ತಾಲೂಕಿನ ಗಟ್ಟೀಪುರ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಗ್ರಾಮದಲ್ಲಿ ಬಿಜೆಪಿಗೆ ಲೀಡ್ ನೀಡಿದ್ದೀರಾ. ನಮ್ಮ ಸ್ನೇಹಿತರೇ ಬಿಜೆಪಿಗೆ ಮತ ಹಾಕಿಸಿರುವುದು. ಆ ಸ್ನೇಹಿತರು, ಗ್ರಾಮದ ಸಮುದಾಯ ಭವನಕ್ಕೆ ಸಂಸದರಿಂದ 25 ಲಕ್ಷ ರೂ. ಅನುದಾನ ಹಾಕಿಸಿಕೊಂಡು ಬರಲಿ, ನಾನು 2 ಕೋಟಿ ರೂ. ಅನುದಾನ ನೀಡುತ್ತೇನೆ ಎಂದ ಅವರು, ಗೆಯ್ಯುವ ಎತ್ತಿಗೆ ಹುಲ್ಲು ಹಾಕಿ, ಅದು ಬಿಟ್ಟು ಯ್ಯರ‌್ಯಾರಿಗೋ ಹುಲ್ಲು ಹಾಕಿದರೆ ತಿಂದು ಹೋಗುತ್ತೇವೆ ಎಂದು ಸಂಸದರ ಹೆಸರು ಪ್ರಸ್ತಾಪಿಸದೆ ಲೇವಡಿ ಮಾಡಿದರು.
ನಾನು ಭಾಗವಹಿಸುವ ಕಾರ್ಯಕ್ರಮಕ್ಕೆ ಸಂಸದರು ಬಂದರೆ ಅಭಿವೃದ್ಧಿ ಕಾಮಗಾರಿಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ನಾನುಹೋದ ನಂತರ ಸಂಸದರು ಬರುತ್ತಾರೆ. ಇಂಥಹವರಿಂದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರು.
ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ನಿಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದೆ. ಈ ವೇಳೆ ಜನರು ಓಟು ಹಾಕಲಿ ಎಂದು ಗ್ರಾರಂಟಿ ಜಾರಿಮಾಡಿಲ್ಲ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸುವುದಿಲ್ಲ ಎಂದು ನನಗೆ ಸಿಎಂ ಬೈದ್ರು. ಇದನ್ನು ನೋಡಿದರೆ ಸಿಎಂಗೆ ಜನರ ಮೇಲಿನ ಪ್ರೀತಿ ಏನೆಂದು ತಿಳಿಯುತ್ತದೆ ಎಂದರು.


ವಿಧಾನಸಭಾ ಚುನಾವಣೆಯಲ್ಲಿ ಬಿಡದಿ, ಕುದೂರಿನವರು ಲೀಡ್ ನೀಡದಿದ್ರೆ ನಾನು ಮನೆಗೆ ಹೋಗಬೇಕಿತ್ತು. ಮಾಡಬಾಳ್ ಹೋಬಳಿ ನನ್ನ ತವರೂರು ಎನ್ನುತ್ತೀರಾ?. ಆದರೆ, ಅವರು ನಿಮಗೆ ಲೀಡ್ ನೀಡಿಲ್ಲ ಎಂದು ಬೇರೆ ಹೋಬಳಿ ಜನರು ಪ್ರಶ್ನಿಸುತ್ತಾರೆ. ಆ ರೀತಿ ಮಾಡದೆ, ಮುಂದಿನ ತಾಪಂ, ಜಿಪಂ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳಿಗೆ ಆಶೀರ್ವದಿಸಿ ಎಂದರು.
ಕೆಪಿಸಿಸಿ, ಕೆಪಿಯುಡಬ್ಲ್ಯುಸಿಸಿ ಸಾಮಾಜಿಕ ಜಾಲತಾಣ ಸಂಯೋಜಕ ಜಿ.ಆರ್.ಮಧು, ರಾಜ್ಯಾಧ್ಯಕ್ಷ ಆರ್.ರಾಕೇಶ್ ಸಮುದಾಯ ಭವನ ಮಂಜೂರಿಗೆ ಅಪಾರವಾಗಿ ಶ್ರಮಿಸಿದ್ದಾರೆ ಎಂದರು.


ಕೆಪಿಸಿಸಿ, ಕೆಪಿಯುಡಬ್ಲ್ಯುಸಿಸಿ ಸಾಮಾಜಿಕ ಜಾಲತಾಣ ರಾಜ್ಯ ಸಂಯೋಜಕ ಜಿ.ಆರ್.ಮಧು ಮಾತನಾಡಿ, ಶಾಸಕ ಎಚ್.ಸಿ.ಬಾಲಕೃಷ್ಣ ಚುನಾವಣೆಗೆ ಮುನ್ನಾ ನುಡಿದಂತೆ ಮಾವಿನ ತೋಪಿನಲ್ಲಿ ಹಳ್ಳದ ರಸ್ತೆ ನಿರ್ಮಾಣ, ನಕಾಶೆ ರಸ್ತೆ ತೆರವುಗೊಳಿಸಿದರು. ಈ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿದ್ದು, ಮುಂದೆಯೂ ಶಾಸಕರನ್ನು ಬೆಂಬಲಿಸೋಣ ಎಂದರು.
ಚಕ್ರಭಾವಿ ಜಂಗಮ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕೆಪಿಸಿಸಿ, ಕೆಪಿಯುಡಬ್ಲ್ಯುಸಿಸಿ ಸಾಮಾಜಿಕ ಜಾಲತಾಣ ಅಧ್ಯಕ್ಷ ಆರ್.ರಾಕೇಶ್, ಬಮುಲ್ ನಿರ್ದೇಶಕ ನರಸಿಂಹಮೂರ್ತಿ, ದಿಶಾ ಸಮಿತಿ ಜೆ.ಪಿ.ಚಂದ್ರೇಗೌಡ, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಇಂಜಿನಿಯರ್ ಜಿ.ಎಸ್.ಶಿವಸ್ವಾಮಿ, ಪಿಡಿಒ ಬಸವರಾಜು, ಜಿಡಿ.ಶಿವರುದ್ರಯ್ಯ, ಡಿ.ಶಿವರುದ್ರಯ್ಯ, ಜಿ.ವಿ.ಶಿವರಾಜು ಇತರರು ಇದ್ದರು.

ನಮ್ಮ ಅಭ್ಯರ್ಥಿಯನ್ನೇ ನೆನಪಿಸಿಕೊಳ್ಳಲಿಲ್ಲ
ಕ್ಷೇತ್ರದ ಅಭಿವೃದ್ಧಿಗೆ ಪ್ರತಿನಿತ್ಯ ದುಡಿಯುತ್ತೇನೆ, ವೈಜಿಗುಡ್ಡ ಜಲಾಶಯದಿಂದ ಈ ಭಾಗದ ಕೆರೆ, ಕಟ್ಟೆ ನೀರು ತುಂಬಿಸಲು ಡಿ.ಕೆ.ಸುರೇಶ್ ಶ್ರಮಿಸಿದ್ದಾರೆ. ಉಚಿತವಾಗಿ ರೈತರಿಗೆ ಟ್ರ್ಯಾನ್ಸ್ ಾರ್ಮ್ ಹಾಕಿಸಿದರು. ಮಹಿಳೆಯರಿಗೆ ಶಕ್ತಿ ಯೋಜನೆ, ಪ್ರತಿ ತಿಂಗಳು 2 ಸಾವಿರ ರೂ. ಸೇರಿ 5 ಗ್ಯಾರಂಟಿಗಳನ್ನು ನೀಡುತ್ತಿದ್ದೇವೆ. ಈ ಗ್ಯಾರಂಟಿಗಳನ್ನು ನೀಡಿ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ ಎಂದು ಪ್ರತಿ ಪಕ್ಷದವರು ನಮ್ಮ ವಿರುದ್ಧ ಆರೋಪಿಸಿದರು. ಜನತೆಗೆ ಗ್ಯಾರಂಟಿ ನೀಡಿದರೂ ಓಟು ಹಾಕಬೇಕಾದರೆ ನಮ್ಮ ಅಭ್ಯರ್ಥಿಯನ್ನು ನೆನಪಿಸಿಕೊಳ್ಳಲಿಲ್ಲ ಎಂದು ಶಾಸಕರು ಬೇಸರಿಸಿದರು.

"ಆರು ತಿಂಗಳೊಳಗೆ ಖಾತೆ ಸಮೇತ ಸಾಗುವಳಿ ಚೀಟಿ ವಿತರಿಸಲಾಗುವುದು, ಗಟ್ಟೀಪುರ ಮಹದೇಶ್ವರ ಕಾಲನಿಯ ಬಳಿ ಅಂಬೇಡ್ಕರ್ ಭವನ ನಿರ್ಮಿಸಲಾಗುವುದು, ಸಮುದಾಯ ಭವನ ಪೂರ್ಣಗೊಳಿಸಲಾಗುವುದು. ಗುಮ್ಮಸಂದ್ರ ಮಠದ ರಸ್ತೆ ಹಾಗೂ ಭಕ್ತರಿಗೆ ಅನುಕೂಲಕ್ಕೆ ವಸತಿ ಕೊಠಡಿ ನಿರ್ಮಿಸಲಾಗುವುದು, ಗಟ್ಟೀಪುರದಲ್ಲಿ 15 ದಿನಗಳ ಒಳಗೆ ಕುಡಿಯುವ ನೀರಿನ ಸೌಲಭ್ಯಕಲ್ಪಿಸಲಾಗುವುದು."
ಎಚ್.ಸಿ.ಬಾಲಕೃಷ್ಣ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net