

ಮಾಗಡಿ ತಾಲೂಕು ಅಧಿಕಾರಿಗಳಿಗೆ ಶಾಸಕ ಬಾಲಕೃಷ್ಣ ಎಚ್ಚರಿಕೆ
ಮಾಗಡಿ
ರೈತರ ಸಮಸ್ಯೆ ಬಗೆಹರಿಸಲಿಲ್ಲ ಎಂದರೆ ಮುಖಕ್ಕೆ ಹೊಡೆಯುತ್ತೇನೆ ಎಂದು ತಹಸೀಲ್ದಾರ್, ಎಡಿಎಲ್ಆರ್ ಅವರನ್ನು ಶಾಸಕ ಎಚ್.ಸಿ.ಬಾಲಕೃಷ್ಣ ತರಾಟೆಗೆ ತೆಗೆದುಕೊಂಡರು.
ಇಲ್ಲಿನ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಪೋಡಿ ದುರಸ್ತಿ ಬಗ್ಗೆ ರೈತರಿಂದ ಸಾಕಷ್ಟು ದೂರು ಕೇಳಿ ಬಂದಿದ್ದರಿಂದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಬಾಲಕೃಷ್ಣ, ರೈತರು ಪ್ರತಿನಿತ್ಯ ತಾಲೂಕು ಕಚೇರಿಗೆ ಅಲೆಯುತ್ತಾರೆ, ಆದರೆ, ನೀವು ಅವರ ಕೆಲಸ ಮಾಡಿಕೊಡದೆ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದೀರಿ, ನೀವು ಮಾಡುವ ಈ ಅವಾಂತರಕ್ಕೆ ಜನ ನಮ್ಮ ಮುಖಕ್ಕೆ ಉಗಿಯುತ್ತಿದ್ದಾರೆ ಎಂದು ತಹಸೀಲ್ದಾರ್ ಹಾಗೂ ಭೂಮಾಪನ, ಭೂದಾಖಲೆಗಳ ಇಲಾಖೆ ಅಧಿಕಾರಿ ಆನಂದ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನೀವು ತಹಸೀಲ್ದಾರ್ ಆಗಿ ತಾಲೂಕಿಗೆ ಬಂದಾಗಿನಿಂದ, ನಾವು ಹೇಳಿದ ಒಂದೂ ಕೆಲಸವನ್ನೂ ನಿಮ್ಮಿಂದ ಮಾಡಲು ಸಾಧ್ಯವಾಗಿಲ್ಲ, ನಮ್ಮದಿರಲಿ... ರೈತರ ಸಮಸ್ಯೆಯನ್ನೂ ಬಗೆಹರಿಸಲಾಗಿಲ್ಲ. ರೈತರ ವಿಚಾರದಲ್ಲಿ ತಮಾಷೆ ಮಾಡ್ತಿದ್ದೀರಾ? ರೈತರ ಕೆಲಸ ಎಂದರೆ ಉಡಾಫೆ ಏಕೆ? ಹೀಗೆ ಮುಂದುವರಿದರೆ ರಸ್ತೆಯಲ್ಲಿ ನಿಲ್ಲಿಸಿ ಇಬ್ಬರಿಗೂ ಹಾರ ಹಾಕಿ, ಸನ್ಮಾನ ಮಾಡಿಸ್ತೀನಿ... ನಿಮಗೆ ನಾಚಿಕೆ ಆಗಲ್ವಾ...? ಎಂದು ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಇಲಾಖೆಯ ವಿಜಯಾ ಸವಣೂರು, ಕಾರ್ಮಿಕ ಇಲಾಖೆ ಅಧಿಕಾರಿ ಸಚಿನ್, ಕಿಸಾನ್ ಕಾಂಗ್ರೆಸ್ ಜಿಲ್ಲಾ‘್ಯಕ್ಷ ಆಗ್ರೋ ಪುರುಷೋತ್ತಮ್, ನಾಗಶೆಟ್ಟಹಳ್ಳಿ ರುದ್ರಾರಾಧ್ಯ ಇತರರು ಇದ್ದರು.