

ಪಾಂಡವಪುರ: ಸಹಕಾರ ಸಂಘಗಳಲ್ಲಿ ಕಾರ್ಯ ನಿರ್ವಹಿಸುವ ಮುಖ್ಯ ಕಾರ್ಯನಿರ್ವಾಹಕರು ಸಹಕಾರ ಸಂಘದ ಕಾಯ್ದೆ ಮತ್ತು ನಿಯಮಗಳನ್ನು ತಿಳಿದುಕೊಳ್ಳದಿದ್ದರೆ ಸಮಸ್ಯೆಗೆ ಸಿಲುಕಬೇಕಾಗುತ್ತದೆ ಎಂದು ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಎಚ್.ಎಸ್.ನಾಗರಾಜಯ್ಯ ತಿಳಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಮಂಡ್ಯ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆ ವತಿಯಿಂದ ಮಂಗಳವಾರ ಪಾಂಡವಪುರ ಉಪ ವಿಭಾಗದ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘಗಳಲ್ಲಿ ಚುನಾವಣೆ ನಿಭಾಯಿಸುವುದು ಬಹಳ ಮುಖ್ಯ. ಸಂಘದ ಆಡಳಿತ ಮಂಡಳಿ ಮತ್ತು ಪದಾಧಿಕಾರಿಗಳ ಚುನಾವಣೆ ನಡಯುತ್ತದೆ. ಈ ಚುನಾವಣೆಗಳ ಸಂದರ್ಭದಲ್ಲಿ ಸಹಕಾರ ಸಂಘದ ಕಾಯ್ದೆ, ನಿಯಮ ಮತ್ತು ಸಂಘದ ಬೈಲಾದಂತೆ ಎಚ್ಚರಿಕೆಯಿಂದ ಮತದಾರರ ಪಟ್ಟಿ, ಚುನಾವಣಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಸಂಘದ ಸಿಇಒಗಳು ಕಾಯ್ದೆಯನ್ನು ಓದಿ ಮನನ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಸಲಹೆ ನೀಡಿದರು.
ಹಿಂದೆ ಸಹಕಾರ ಇಲಾಖೆಯೇ ಚುನಾವಣೆ ಪ್ರಕ್ರಿಯೆ ನಡೆಸುತ್ತಿತ್ತು. 2013ರ ನಂತರ ಸಹಕಾರ ಸಂಘಗಳಿಗೆ ಚುನಾವಣೆ ನಡೆಸುವುದಕ್ಕಾಗಿಯೇ ಸಹಕಾರ ಚುನಾವಣಾ ಪ್ರಾಧಿಕಾರ ರಚನೆಯಾಗಿದೆ. ಚುನಾವಣೆಗಳಿಗೆ ಸಂಬಂಧಿಸಿದಂತೆ ಸಹಕಾರ ಕಾಯ್ದೆ, ನಿಯಮದ ಜತೆಗೆ ಸರ್ಕಾರ ಆಗಾಗ ಹೊರಡಿಸುವ ಸುತ್ತೋಲೆಗಳ ಆದೇಶ ಪಾಲನೆಯ ಅನುಸಾರವಾಗಿ ಕೆಲಸ ಮಾಡಬೇಕಿದೆ. ಚುನಾವಣೆಗಳು ಮುಕ್ತ, ನಿಷ್ಪಕ್ಷಪಾತ, ನ್ಯಾಯಸಮ್ಮತ ಮತ್ತು ಶಾಂತಿಯುತವಾಗಿ ನಡೆಯಬೇಕು. ಧರ್ಮ ಮತ್ತು ಜಾತಿ ಆಧಾರದ ಮೇಲೆ ಚುನಾವಣೆಗಳು ನಡೆಯಬಾರದು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಸಹಕಾರ ಕಾಯ್ದೆಗೆ ಆಗಾಗ್ಗೆ ತಿದ್ದುಪಡಿಗಳು ಆಗುತ್ತಿರುತ್ತವೆ. ಇದನ್ನು ತಿಳಿದುಕೊಳ್ಳುವುದು ಸಿಇಒಗಳ ಮೊದಲ ಕೆಲಸ. ಸಹಕಾರ ಸಂಘದಲ್ಲಿ ವಹಿವಾಟು ಮಾಡಿರುವವರು ಮತ್ತು ಕನಿಷ್ಠ ಎರಡು ವಾರ್ಷಿಕ ಮಹಾಸಭೆಯಲ್ಲಿ ಕಡ್ಡಾಯವಾಗಿ ಹಾಜರಿರುವವರಿಗೆ ಮಾತ್ರ ಮತದಾನ ಅವಕಾಶವಿದೆ ಎಂಬ ನಿಯಮವಿದೆ. ಆದರೆ ಕೆಲವೊಮ್ಮೆ ಈ ನಿಯಮ ಪಾಲನೆ ಮಾಡದವರಿಗೂ ಮತದಾನ ಹಕ್ಕು ನೀಡಲಾಗುತ್ತಿದೆ. ಈ ವಿಚಾರವಾಗಿ ನ್ಯಾಯಾಲಯದಲ್ಲಿ ಹಲವು ತೀರ್ಪುಗಳು ಬಂದಿದೆ. ಸಹಕಾರ ಸಂಘಗಳ ಸಿಇಒಗಳು ಕಾಯ್ದೆ ಬಗ್ಗೆ ಅರಿತುಕೊಂಡರೆ ಷೇರುದಾರರು ಕೇಳುವ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರ ಕೊಡಬಹುದು ಎಂದರು.
ಕಾರ್ಯಕ್ರಮದಲ್ಲಿ ಪಾಂಡವಪುರ ಉಪವಿಭಾಗದ ಕೆ.ಆರ್.ಪೇಟೆ, ನಾಗಮಂಗಲ, ಶ್ರೀರಂಗಪಟ್ಟಣ ಸಹಕಾರ ಸಂಘಗಳ ಕಾರ್ಯನಿರ್ವಾಹಕರು ಭಾಗವಹಿಸಿ ಚುನಾವಣಾ ವಿಚಾರವಾಗಿ ತರಬೇತಿ ಪಡೆದರು.
ಕಾರ್ಯಕ್ರಮದಲ್ಲಿ ಸಹಕಾರ ಇಲಾಖೆ ಸಹಾಯಕ ನಿಬಂಧಕ ಆರ್.ನಾಗಭೂಷಣ್, ಒಕ್ಕೂಟದ ನಿರ್ದೇಶಕರಾದ ವಿ.ಎಸ್.ನಿಂಗೇಗೌಡ, ಯು.ಸಿ.ಶಿವಕುಮಾರ್, ಕೆ.ಎಸ್.ಪ್ರೇಮಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಶಿವಕುಮಾರ್, ವ್ಯವಸ್ಥಾಪಕ ಎಂ.ಆರ್.ಪ್ರಮೋದನ್ ಇತರರು ಇದ್ದರು.