

ಕಿಕ್ಕೇರಿ: ಉಸಿರಾಡಲು ಶುದ್ಧಗಾಳಿ ಅವಶ್ಯವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗಿಡಮರಗಳನ್ನು ನೆಟ್ಟು ಪೋಷಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಹೇಳಿದರು.
ಇಲ್ಲಿನ ಕೆಪಿಎಸ್ ಕಾಲೇಜು ವಿಭಾಗದಲ್ಲಿ ಎನ್‌ಎಸ್‌ಎಸ್ ಘಟಕದಿಂದ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಆಚರಣೆಯಲ್ಲಿ ಹಸಿರು ಸಂವರ್ಧನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರೋಗಗಳು ಬಾಧಿಸಲು ಶುದ್ಧ ಗಾಳಿ ಸಿಗದೆ, ಪರಿಸರ, ವಾಯು ಮಾಲಿನ್ಯ ಸಂಭವಿಸುತ್ತಿರುವುದೇ ಕಾರಣವಾಗಿದೆ. ಮುಂದಿನ ಮಕ್ಕಳು ಆರೋಗ್ಯಕರವಾಗಿ ಬದುಕಲು ಪ್ರಕೃತಿಯನ್ನು ಪ್ರಕೃತಿಯಾಗಿ ಬಿಡಿ. ಪ್ರಕೃತಿ ಮುನಿದರೆ ಸರ್ವನಾಶ ಎಂಬುದನ್ನು ಅರಿಯಬೇಕಿದೆ ಎಂದು ಎಚ್ಚರಿಸಿದರು.
ಮರಗಿಡಗಳಿಂದ ವಾತಾವರಣ ತಂಪು, ಋತುವಿಗೆ ತಕ್ಕಂತೆ ಮಳೆ, ಬೆಳೆ, ಭೂಮಿಯ ಫಲವತ್ತತೆ ಎಲ್ಲವೂ ಸಿಗಲಿದೆ. ಮರಗಳು ಭೂಮಿಯ ಲವಣಾಂಶವನ್ನು ಹಿಡಿದು, ಭೂಸವಕಳಿಯಂತಹ ವಿಕೋಪ ತಡೆಯಲಿದೆ. ಪ್ರಾಣಿ ಪಕ್ಷಿಗಳು ಬದುಕಲು ಅವಶ್ಯವಾಗಿ ಬೇಕಿರುವ ಮರಗಿಡಗಳನ್ನು ಬೆಳೆಸಲು ಮಕ್ಕಳಿಗೆ ತಿಳಿ ಹೇಳುವ ಕೆಲಸ ಸಾಮೂಹಿಕವಾಗಿ ನಡೆಯಬೇಕಿದೆ ಎಂದರು.
ಪ್ರಭಾರ ಪ್ರಾಂಶುಪಾಲ ಎನ್. ರವೀಂದ್ರ ಮಾತನಾಡಿ, ಕೇರಳ, ಕೊಡಗಿನಂತಹ ಪ್ರದೇಶದಲ್ಲಿ ಇತ್ತೀಚಿನ ದಿನದಲ್ಲಿ ಭೂ ಕುಸಿತ, ಜನ, ಜಾನುವಾರುಗಳ ಜೀವ ಹಾನಿ ಸಾಮಾನ್ಯವಾಗುತ್ತಿದ್ದು, ಇದು ಪ್ರಕೃತಿ ನೀಡುತ್ತಿರುವ ಎಚ್ಚರಿಕೆ ಗಂಟೆ ಎಂಬುದನ್ನು ಅರಿಯ ಬೇಕಿದೆ. ಮನೆಗೊಂದು ಮರ ಎಂಬ ಪರಿಕಲ್ಪನೆ ಮೂಡಿಸಿಕೊಂಡು ಪ್ರಕೃತಿಯೊಂದಿಗೆ ಎಲ್ಲರೂ ಬದುಕಲು ಮುಂದಾಗಬೇಕು ಎಂದರು.
ವಿದ್ಯಾರ್ಥಿಗಳು ಕಾಲೇಜು ಮೈದಾನದಲ್ಲಿ ವಿವಿಧ ಬಗೆಯ ಗಿಡ ನೆಟ್ಟು ಮರಗಿಡ ಸಂರಕ್ಷಣೆ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.
ಎನ್‌ಎಸ್‌ಎಸ್ ಅಧಿಕಾರಿ ಜಿ.ಎಸ್.ಕುಮಾರಸ್ವಾಮಿ, ಮಂಜುನಾಥ್, ರಮೇಶ್, ನಾಗೇಶ್, ವಿನಾಯಕ ಇದ್ದರು.