ಕೃಷಿಕರು ಒಗ್ಗಟ್ಟಾಗಿ ಹೋರಾಡದಿದ್ದರೆ ಆಪತ್ತು ತಪ್ಪಿದ್ದಲ್ಲ

25sdp2- samavesha
Published on

ಸಿದ್ದಾಪುರ: ಕೃಷಿಕರೆಲ್ಲರೂ ಒಗ್ಗಟ್ಟಾಗಿ ಮತ್ತು ಒಂದು ಧ್ವನಿಯಾಗಿ ಹೋರಾಡದಿದ್ದರೆ ನಮಗೆ ಆಪತ್ತು ತಪ್ಪಿದ್ದಲ್ಲ. ನಾವು ಸಲ್ಲಿಸುವ ಅಹವಾಲು ಕಾರ್ಯರೂಪಕ್ಕೆ ಬರುವುದಕ್ಕೆ ಸಂಘಟನೆ ಅನಿವಾರ್ಯ ಎಂದು ಗೋವಿಂದರಾಜ ಹೆಗಡೆ ತಾರಗೋಡು ಹೇಳಿದರು.
ತಾಲೂಕಿನ ಇಟಗಿ ಸಮೀಪದ ಹೊನ್ನೆಘಟಗಿ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದ ಇಟಗಿ, ವಾಜಗೋಡು ಹಾಗೂ ಕ್ಯಾದಗಿ ಗ್ರಾಪಂ ವ್ಯಾಪ್ತಿಯ ರೈತರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಡಕೆೆ, ತೆಂಗು, ಕಬ್ಬು, ತರಕಾರಿ, ಭತ್ತ ಮತ್ತಿತರ ಬೆಳೆಗಳಿಗೆ ಮಂಗನ ಉಪಟಳ ಇತ್ತೀಚೆಗೆ ವಿಪರೀತವಾಗಿವೆ. ಮನೆಯ ಹೆಂಚಿನ ಸಂದಿಯಿಂದಲೂ ನುಸುಳಿ ಅಕ್ಕಿ, ಕಾಯಿಗಳನ್ನು, ಮಾಡಿಟ್ಟ ಅನ್ನವನ್ನು ಹಾಳುಗೆಡಹುತ್ತಿವೆ. ಇಂತಹ ಮಂಗಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಅಸಮರ್ಥರಾಗಿದ್ದೇವೆ. ಈ ಕುರಿತು ಸಂಬಂಧ ಪಟ್ಟ ಇಲಾಖೆಗಳಿಗೆ ನಮ್ಮ ಅಳಲು ತೋಡಿಕೊಳ್ಳಲು ಒಟ್ಟಾಗೋಣ ಎಂದು ಹೇಳಿದರು.
ಹಿರಿಯ ವಕೀಲ ಜೆ.ಪಿ.ಎನ್. ಹೆಗಡೆ ಹರಗಿ, ವಿನಾಯಕ ಸುಬ್ರಾಯ ಹೆಗಡೆ ಹರಗಿ, ಶಿವಾನಂದ ಹೆಗಡೆ ತಾರಗೋಡು, ರಾಮಕೃಷ್ಣ ಹೆಗಡೆ ಕೆಳಗಿನಮನೆ ಮತ್ತಿತರ ಹಿರಿಯ ರೈತರ ಮಾರ್ಗದರ್ಶನದಲ್ಲಿ ರೈತರು ರ್ಚಚಿಸಿದರು.
ಇದೇ ಸಂದರ್ಭದಲ್ಲಿ ರೈತರ ಬೆಳೆಗಳನ್ನು ನಾಶ ಪಡಿಸುವ ಮಂಗಗಳಿಂದ ರಕ್ಷಿಸಿಕೊಳ್ಳಲು ವಿವಿಧ ಸರ್ಕಾರಿ ಇಲಾಖೆಗಳಿಗೆ ಸಮಸ್ಯೆಗಳನ್ನು ಮುಟ್ಟಿಸುವುದಕ್ಕಾಗಿ ಶ್ರೀ ರಾಮೇಶ್ವರ ಕೃಷಿ ಪರಿವಾರ ಹೋರಾಟ ಸಮಿತಿ ಇಟಗಿ ವೇದಿಕೆ ರಚಿಸಲಾಯಿತು.
ಅಧ್ಯಕ್ಷರಾಗಿ ಗೋವಿಂದರಾಜ ಹೆಗಡೆ ತಾರಗೋಡು, ಕಾರ್ಯದರ್ಶಿಯಾಗಿ ಮಹಾಬಲೇಶ್ವರ ಭಟ್ಟ ಇಟಗಿ ಹಾಗೂ ಮೂರು ಗ್ರಾಪಂ ವ್ಯಾಪ್ತಿಯ ನಲವತ್ತಕ್ಕೂ ಹೆಚ್ಚು ರೈತರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲಾಯಿತು.
ರೋಹಿತ ಶಾಸ್ತ್ರಿ ಕುಳಿಬೀಡು ಸ್ವಾಗತಿಸಿದರು. ಮಹಾಬಲೇಶ್ವರ ಭಟ್ಟ ಇಟಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net