

ವಿಜಯಪುರ: ಆರು ದಶಕಗಳ ಬೇಡಿಕೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸದಿದ್ದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ ಎಂದು ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ವಕೀಲರು ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈಗಾಗಲೇ ಬಾಗಲಕೋಟೆಯಲ್ಲಿ ಯುಕೆಪಿ ಹಂತ-3 ಪೂರ್ಣಗೊಳಿಸಲು ಆಗ್ರಹಿ ಹೋರಾಟ ನಡೆಯುತ್ತಿದೆ. ಜಿಲ್ಲಾ ವಕೀಲರ ಸಂಘ ಕೂಡ ಬೆಂಬಲ ವ್ಯಕ್ತಪಡಿಸಿದೆ. ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆಯಲಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯಿಂದಾಗಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ನೀರಾವರಿ ಸೌಲಭ್ಯಕ್ಕೆ ಒಳಪಡಲಿವೆ. ಹೀಗಾಗಿ ಕೂಡಲೇ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸಬೇಕು. ಯೋಜನೆಯಿಂದ ಭಾದಿತರಾದ ಸಂತ್ರಸ್ತರ ಸರ್ವ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು. ಪುನರ್ವಸತಿ ಮತ್ತು ಪುನರ್ನಿರ್ಮಾಣ ಕಾರ್ಯವನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.
ಹಲವು ವರ್ಷಗಳಿಂದ ನ್ಯಾಯವಾದಿಗಳ ಸಂಘ ವಿಜಯಪುರದ ಬೇಡಿಕೆಯಾದ ಲಿಫ್ಟ್, ಭೂಸ್ವಾಧೀನ ಪ್ರಕರಣಗಳನ್ನು ನಡೆಯಿಸಲು ಹೆಚ್ಚುವರಿ ಜಿಲ್ಲಾ ನ್ಯಾಯಾಲಯಗಳನ್ನು ಸ್ಥಾಪಿಸಲು ಮತ್ತು ಹೆಚ್ಚುವರಿ ನ್ಯಾಯವಾದಿಗಳ ಕೊಠಡಿಗಳನ್ನು ನಿರ್ಮಿಸಲು ಹಣ ಮಂಜೂರು ಮಾಡಿ ಮುಂದಿನ ಕ್ರಮಕ್ಕೆ ಆದೇಶವನ್ನು ಮಾಡುತ್ತಿಲ್ಲ. ಇದರಿಂದ ನಮ್ಮ ವಕೀಲರ ಸಂಘಕ್ಕೆ ಅನ್ಯಾಯ ಮಾಡುತ್ತಾ ಬಂದಿದ್ದೀರಿ. ಈ ಬಗ್ಗೆ ತಕ್ಷಣವೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಪ್ರತಿ ಬಜೆಟ್‌ನಲ್ಲಿ ಎಲ್ಲ ಸರ್ಕಾರಗಳು ಉತ್ತರ ಕರ್ನಾಟಕದ ಪ್ರಮುಖ ಯೋಜನೆಗಳಿಗೆ ಸಾಕಷ್ಟು ಅನುದಾನ ನೀಡದೇ ಮಲತಾಯಿ ಧೋರಣೆ ತಾಳುತ್ತಾ ಬಂದಿವೆ. ಈ ತಾರತಮ್ಯ ಹಾಗೂ ನಿರ್ಲಕ್ಷೃ ಧೋರಣೆ ನಿಲ್ಲಬೇಕು. ತ್ವರಿತವಾಗಿ ಯೋಜನೆ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಡಿ.ಜಿ. ಬಿರಾದಾರ, ಮುಖಂಡರಾದ ಎಂ.ಎ. ಕಾಖಂಡಕಿ, ಯು.ಎಂ. ಆಲಗೂರ, ವೈ.ಬಿ. ಬಡಿಗೇರ, ವಿ.ಎಚ್. ಗಾಳಪ್ಪಗೋಳ, ಎಂ.ಆರ್. ಹವಾಲ್ದಾರ್, ಎಂ.ಎಸ್. ಇನಾಮದಾರ ಮತ್ತಿತರರಿದ್ದರು.