

ಹುಣಸೂರು: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ತೀವ್ರ ಕುಸಿತದಿಂದಾಗಿ ದಲಿತ, ಬಡ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗುತ್ತಿದ್ದು, ಶಿಕ್ಷಕ ಸಮುದಾಯ ಎಚ್ಚೆತ್ತುಕೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಒತ್ತಾಯಿಸಿದರು.
ನಗರದ ಬಾಚಹಳ್ಳಿಯ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಜವರೇಗೌಡರ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶಗಳು ತೀವ್ರ ಕುಸಿತ ಕಂಡಿವೆ. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳ ಶಿಕ್ಷಣ ಮಟ್ಟ ತೀವ್ರವಾಗಿ ಕುಸಿದು ಹೋಗಿದ್ದು, ತಾಲೂಕಿನ ದಲಿತರು, ಬಡವರು, ಕೂಲಿ ಕಾರ್ಮಿಕರು, ಆದಿವಾಸಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಲು ಭಯಪಡುವ ಸ್ಥಿತಿ ಇದೆ. ಇದಕ್ಕೆ ಸ್ಪಷ್ಟವಾದ ಕಾರಣಗಳು ತಿಳಿಯುತ್ತಿಲ್ಲ. ಇದಕ್ಕೆ ಯಾರನ್ನು ದೂರಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ಸಂಬಳವನ್ನು ಪಡೆಯುವ ಶಿಕ್ಷಕರು ತಮ್ಮ ಆತ್ಮಸಾಕ್ಷಿಯಿಂದ ಮಕ್ಕಳಿಗೆ ಪಾಠ ಹೇಳಿ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು. ಕೆಲವು ಸರ್ಕಾರಿ ಶಾಲೆಯ ಶಿಕ್ಷಕರು ಸಮಯಕ್ಕೆ ಸರಿಯಾಗಿ ಹೋಗುತ್ತಿಲ್ಲ. ಮಕ್ಕಳಿಗೆ ಸರಿಯಾದ ಪಾಠ ಮಾಡದೆ ಅನ್ಯ ಕೆಲಸಗಳಾದ ಬಡ್ಡಿ, ಚೀಟಿ ವ್ಯವಹಾರ, ಜಾತಿ ಗುಂಪುಗಾರಿಕೆ, ರಾಜಕೀಯ ಪಕ್ಷಗಳೊಂದಿಗೆ ನಂಟು ಬೆಳೆಸುತ್ತಾ ತಾಲೂಕಿನಲ್ಲಿ ಗುಂಪುಗಾರಿಕೆ ಮಾಡುತ್ತಾ ತಮ್ಮ ವೃತ್ತಿಗೆ ಮೋಸ ಮಾಡುತ್ತಾ ಕಾಲಹರಣ ಮಾಡುತ್ತಿರುವುದೇ ಫಲಿತಾಂಶ ಕುಸಿಯಲು ಕಾರಣವಾಗುತ್ತಿದೆ ಎನ್ನುವ ವಿಷಯ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಶಿಕ್ಷಕರನ್ನು ಮೇಲುಸ್ತುವಾರಿ ಮಾಡುವ ಅಧಿಕಾರಿಗಳು ಸಹ ಇದೇ ಹಾದಿಯನ್ನು ಹಿಡಿಯುತ್ತಿದ್ದಾರೆ ಎನ್ನಲಾಗಿದ್ದು, ಕೆಲವು ಶಿಕ್ಷಕರಿಂದ ಆಗುತ್ತಿರುವ ಇಂತಹ ಘೋರ ಅನ್ಯಾಯವನ್ನು ಅರಿತು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪಾಲಕರು ಭಯಪಡುವ ಸ್ಥಿತಿ ಇದೆ ಎಂದರು.
ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಎಂದು ಸರ್ಕಾರ ಪದೇ ಪದೆ ಹೇಳುತ್ತಿದ್ದು, ನಿರ್ಲಕ್ಷ್ಯ ವಹಿಸುತ್ತಿರುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ದಸಂಸ ಮತ್ತು ರೈತ ಸಂಘ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಆಗಲಿದೆ ಎಂದರು.
ಶಿಕ್ಷಣ ಇಲಾಖೆ ಉಪನಿರ್ದೇಶಕ ಜವರೇಗೌಡ ಮಾತನಾಡಿ, ಈ ವಿಷಯದ ಬಗ್ಗೆ ಎಲ್ಲ ಶಿಕ್ಷಕರನ್ನು ಕರೆದು ಮಾಹಿತಿ ಪಡೆದುಕೊಂಡು ಕ್ರಮವಹಿಸಲಿದ್ದೇನೆ. ಆದಷ್ಟು ಬೇಗ ಹುಣಸೂರಿನ ಶಿಕ್ಷಣದ ಗುಣಮಟ್ಟವನ್ನು ಸುಧಾರಣೆಗೆ ತರಲು ಕ್ರಮ ವಹಿಸುತ್ತೇನೆ. ನೀವು ಹೇಳಿದ ರೀತಿ ಕೆಲವು ಶಿಕ್ಷಕರು ಶಾಲೆಗೆ ಸರಿಯಾಗಿ ಬಾರದೆ, ಅನ್ಯ ಕೆಲಸದಲ್ಲಿ ಜಾತಿ ಗುಂಪುಗಾರಿಕೆ ಮಾಡುತ್ತಿರುವ ಶಿಕ್ಷಕರನ್ನು ಗುರುತಿಸಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ, ರಾಜಯ್ಯ, ನಿರೂಪ ವೆಸ್ಲಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಂದ್ರ, ದಲಿತ ಮುಖಂಡರಾದ ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ರೈತ ಸಂಘದ ಕಿರಿಜಾಜಿ ಧನಂಜಯ, ಮಲ್ಲಿಕ್ ಪಾಷ, ಲತೇಶ್ ಯಶೋಧರಪುರ, ಮುಖ್ಯಶಿಕ್ಷಕರು ಇತರ ಅಧಿಕಾರಿಗಳು ಹಾಜರಿದ್ದರು. ಶಿಕ್ಷಕರ ಕುರಿತು ಕ್ರಮವಹಿಸುವಂತೆ ಒತ್ತಾಯಿಸಿ ಮುಖಂಡರು ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.