ಸೋಲೂರು ಬೇರ್ಪಟ್ಟರೆ ಮಾಗಡಿಗೆ ನಷ್ಟ

12 RMN-MGD P3
Published on

* ಹೋಬಳಿಯಿಂದ ಶೇ.42 ಕರವಸೂಲಿ

* ಭೂ ವ್ಯವಹಾರವೂ ಹೆಚ್ಚು

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

ಸೋಲೂರು ನೆಲಮಂಗಲಕ್ಕೆ ಸೇರ್ಪಡೆಗೊಂಡರೆ ಮಾಗಡಿ ತಾಲೂಕು ಆದಾಯ ಕುಸಿದು, ಆರ್ಥಿಕತೆಗೆ ಹೊಡೆತ ಬೀಳುವ ಆತಂಕವಿದೆ.

ಹೌದು..! ತಾಲೂಕಿನ ತಿಪ್ಪಸಂದ್ರ, ಮಾಡಬಾಳ್, ಕುದೂರು, ಕಸಬಾ ಹೋಬಳಿಗಳಿಗೆ ಹೋಲಿಸಿದರೆ ಸೋಲೂರು ಹೋಬಳಿಯಿಂದ ಶೇ.42ರಷ್ಟು ಕರ ವಸೂಲಿ ಜತೆಗೆ

ಉಪನೋಂದಣಾಧಿಕಾರಿ ಕಚೇರಿಯಲ್ಲಿಯೂ ಸೋಲೂರಿನ ಭೂ ವ್ಯವಹಾರ ಹೆಚ್ಚಾಗಿದೆ. ಒಂದು ವೇಳೆ ಮಾಗಡಿಯಿಂದ ಸೋಲೂರು ಬೇರ್ಪಟ್ಟರೆ ತಾಲೂಕಿನ ಆದಾಯ ಕುಸಿದು, ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಶಾಸಕ ಬಾಲಕೃಷ್ಣ ಕೂಡಲೇ ಸೋಲೂರನ್ನು ಉಳಿಸಿಕೊಳ್ಳಲು ಕ್ರಮವಹಿಸಬೇಕು ಎಂದು ಜೆಡಿಎಸ್-ಬಿಜೆಪಿ ಮೈತ್ರಿ ಆಗ್ರಹಿಸುವುದರೊಂದಿಗೆ ಬೃಹತ್ ಪ್ರತಿಭಟನೆಗೂ ಸಜ್ಜಾಗುತ್ತಿದೆ.

ಡಿ.ಕೆ. ಬ್ರದರ್ಸ್‌ ನಿಜವಾಗಿಯೂ ನಮ್ಮ ಜಿಲ್ಲೆಯವರೇ? ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಹುಸಿ ಭರವಸೆ ಹಾಗೂ ಎಚ್.ಡಿ.ಕುಮಾರಸ್ವಾಮಿ ಹಾಸನ ಮೂಲದವರು, ಅವರಿಗೆ ಇಲ್ಲಿ ಏನು ಹಕ್ಕಿದೆ? ಎಂದು ಹೇಳಿಕೊಂಡೇ ರಾಜಕೀಯ ಮಾಡುತ್ತಿರುವ ಡಿ.ಕೆ.ಸಹೋದರರೂ ಮಾಗಡಿ ತಾಲೂಕು ವಿಭಜನೆಗೆ ಕೈಹಾಕಿದಂತಿದೆ. ಜಿಲ್ಲೆಯ ಹೋಬಳಿ ಬೇರೊಂದು ಜಿಲ್ಲೆಗೆ ಸೇರ್ಪಡೆಗೊಳ್ಳುತ್ತಿದ್ದರೂ ಡಿ.ಕೆ.ಬ್ರದರ್ಸ್‌ ಕಂಡೂ ಕಾಣದಂತಿದ್ದಾರೆ. ಇವರು ನಿಜವಾಗಿಯೂ ಜಿಲ್ಲೆಯವರೇ? ಎಂದು ಮೈತ್ರಿ ಮುಖಂಡರು ಪ್ರಶ್ನಿಸುತ್ತಿದ್ದಾರೆ. ಇನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಉತ್ತರ ಭಾರತದ ಪ್ರವಾಸದಿಂದ ಯಾವಾಗ ಮಾಗಡಿಗೆ ಬಂದು, ಯಾವ ನಿಲುವು ತೋರುತ್ತಾರೆಯೋ ಕಾದು ನೋಡೋಣ. ಸೋಲೂರನ್ನು ಅಷ್ಟು ಸಲೀಸಾಗಿ ನೆಲಮಂಗಲಕ್ಕೆ ಸೇರ್ಪಡೆ ಮಾಡಲು ಬಿಡುವುದಿಲ್ಲ ಎನ್ನುತ್ತಿದ್ದಾರೆ.

ಕುಣಿಗಲ್‌ಗೆ ಸೇರಿಸಿ ಅಂದ್ರೆ?

ಸೋಲೂರು ಹೋಬಳಿಗಿಂತ ತಿಪ್ಪಸಂದ್ರ ಹೋಬಳಿ ಸಾಕಷ್ಟು ಹಿಂದುಳಿದಿದೆ. ಒಂದೆಡೆ ಸೋಲೂರು ಹೋಬಳಿ ಸೇರ್ಪಡೆಗೊಂಡರೆ ತಾಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿರುವ ತಿಪ್ಪಸಂದ್ರ ಹೋಬಳಿಯ ಜನ ನಮ್ಮನ್ನು ಪಕ್ಕದ 8 ಕಿಮೀ ಅಂತರದಲ್ಲಿರುವ ಕುಣಿಗಲ್‌ಗೆ ಸೇರಿಸಿ ಎನ್ನಬಹುದಲ್ಲ ಎಂಬ ಚರ್ಚೆಗಳು ಮುನ್ನೆಲೆಗೆ ಬರಲಿವೆ. ನೆಲಮಂಗಲಕ್ಕೆ ಸೋಲೂರು ಸೇರ್ಪಡೆ ಆದೇಶಕ್ಕೆ ತಡೆಯಾಜ್ಞೆ ಬೀಳದಿದ್ದರೆ ತಾಲೂಕಿನ ಗಡಿಭಾಗಗಳು, ತಮಗಿಷ್ಟವಾದ, ಹತ್ತಿರದ ತಾಲೂಕುಗಳನ್ನು ಆಯ್ಕೆಮಾಡಿಕೊಳ್ಳುವ ಸಂದರ್ಭಗಳು ದೂರವಿಲ್ಲ ಎನ್ನುವುದು ಹಲವರ ಅಭಿಪ್ರಾಯ.

ಬಹುಮತದ ದುರ್ಬಳಕೆ, ನಿಯಮ ಉಲ್ಲಂಘನೆ

ಬಹುಮತವಿದೆ ಎಂದು ಸರ್ಕಾರವು ಕ್ಯಾಬಿನೆಟ್ ದುರ್ಬಳಸಿಕೊಂಡು ಅವೈಜ್ಞಾನಿಕವಾಗಿ ಸೋಲೂರು ಹೋಬಳಿಯನ್ನು ಮತ್ತೊಂದು ಜಿಲ್ಲೆಗೆ ಸೇರಿಸಿದೆ. ಚುನಾವಣಾ ಮತ್ತು ಕೇಂದ್ರ ಸರ್ಕಾರದ ಕ್ಷೇತ್ರ ವಿಂಗಡಣೆ ಆಯೋಗದ ಅನುಮತಿ ಪಡೆಯದೆ ರಾಜ್ಯ ಕ್ಯಾಬಿನೆಟ್ ಮುಂದೆ ತರಾತುರಿಯಿಂದ ಸೋಲೂರು ಸೇರ್ಪಡೆ ವಿಷಯ ತಂದು ಅಧಿಸೂಚನೆ ಹೊರಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಯಾಗಬೇಕು ಎಂದು ರೈತಸಂಘಟನೆಗಳು ಒತ್ತಾಯಿಸುತ್ತಿವೆ.

ಮತದಾನದ ಹಕ್ಕು ಮಾಗಡಿಗೆ ಕೊಡಬೇಕಿತ್ತು!

ದಾಬಸ್‌ಪೇಟೆ, ತ್ಯಾಮಗೊಂಡ್ಲು ಹೋಬಳಿಗಳು 2008ಕ್ಕೂ ಮುನ್ನ ಪಕ್ಕದ ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರಕ್ಕೆ ಮತದಾನ ಮಾಡುತ್ತಿದ್ದವು. ಆದರೆ 2008 ಕೇಂದ್ರ ಆಯೋಗದ ನಿಯಮದಂತೆ ಮಾತೃ ತಾಲೂಕು ನೆಲಮಂಗಲಕ್ಕೆ ಮತದಾನ ಮಾಡಲು ಆದೇಶಿಸಲಾಯಿತು. ರಾಮನಗರ ಜಿಲ್ಲೆಯಾಗುವ ಮುನ್ನ ಮಾಗಡಿ ತಾಲೂಕು ಬೆಂ.ಗ್ರಾಮಾಂತರ ಜಿಲ್ಲೆಯಲ್ಲೇ ಇತ್ತು. ಹೀಗಾಗಿ ಆಯೋಗದ ವಿಂಗಡಣೆ ನಿಯಮ ಆಯಾ ಜಿಲ್ಲೆಗೆ ಸೀಮಿತವಾಗಿ ಸರಿಯಾಗಿಯೇ ಇತ್ತು. ಆದರೆ ರಾಮನಗರ ಹೊಸ ಜಿಲ್ಲೆಯಾದಾಗ, ಸೋಲೂರಿನ ಮತದಾನವನ್ನು ಆಯೋಗದ ನಿಯಮದ ಪ್ರಕಾರ ಮಾತೃ ಜಿಲ್ಲೆಗೆ ವರ್ಗಾಯಿಸದೆ ಇದ್ದುದು ಅಲ್ಲಿನ ಸಮಸ್ಯೆಯಾಗಿದೆ. ಇನ್ನು ಆಯೋಗದ ನಿಯಮದಂತೆ ಮತದಾನದ ಹಕ್ಕನ್ನು ಮಾಗಡಿಗೆ ವರ್ಗಾಯಿಸುವ ಬದಲು ಸೋಲೂರನ್ನೇ ತಾಲೂಕಿನಿಂದ ಬೇರ್ಪಡಿಸಿರುವುದು ಕಾನೂನುಬಾಹಿರ. ಮತ್ತು ಇದು ರಾಜಕೀಯ ಕುತಂತ್ರ ಎಂಬ ಆರೋಪ ಕೇಳಿಬರುತ್ತಿದೆ.

ಆಕ್ಷೇಪ ಸಲ್ಲಿಕೆಗೆ ಅ.3ರವರೆಗೆ ಕಾಲಾವಧಿ

ನೆಲಮಂಗಲಕ್ಕೆ ಸೋಲೂರು ಹೋಬಳಿ ಸೇರ್ಪಡೆ ವಿರುದ್ಧ ಆಕ್ಷೇಪ ಸಲ್ಲಿಕೆಗೆ ಅಕ್ಟೋಬರ್ 3ರವರೆಗೂ ಅವಕಾಶವಿದೆ. ಈಗಾಗಲೇ ಸಾಕಷ್ಟು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಬೆಂಗಳೂರಿನ ಎಂಎಸ್ ಬಿಲ್ಡಿಂಗ್ 2 ಬ್ಲಾಕ್ 5ನೇ ಮಹಡಿಯ ಕಂದಾಯ ಇಲಾಖೆ ಪ್ರಿನ್ಸಿಪಾಲ್ ಸೆಕ್ರೆಟ್ರಿಗೆ ಆಕ್ಷೇಪಣೆ ಸಲ್ಲಿಸಬಹುದು.

ಸೋಲೂರು ಹೋಬಳಿ ಮಾಗಡಿಯಲ್ಲಿದ್ದರೆ ಮೀಸಲು ಕ್ಷೇತ್ರವಾಗುತ್ತದೆ ಎಂಬ ಭಯ ಹಾಗೂ ಮಾಗಡಿ ಕ್ಷೇತ್ರ ಮೇಲುವರ್ಗದವರ ಅಧೀನದಲ್ಲಿರಬೇಕು ಎಂಬ ಆಲೋಚನೆ ಶಾಸಕರಿಗೆ ಇದ್ದಂತಿದೆ. ಸೋಲೂರು ಹೋಬಳಿಯನ್ನು ಮಾಗಡಿಯಲ್ಲೇ ಉಳಿಸಿಕೊಳ್ಳಬೇಕು. ತಾಲೂಕಿನಿಂದ ಹೋಬಳಿ ಬೇರ್ಪಟ್ಟರೆ ಜಿಲ್ಲೆಯ ಭೂಪಟದಲ್ಲಿ ಕಾಂಗ್ರೆಸ್ ಇಲ್ಲದಂತಾಗುತ್ತದೆ.ಎ.ಎಚ್.ಬಸವರಾಜುರಾಜ್ಯ ಬಿಜೆಪಿ ಒಬಿಸಿ ಕೋಶಾಧ್ಯಕ್ಷರಾಜ್ಯದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಸರ್ಕಾರವಿದೆ. ಅವರದೇ ಪೆನ್ನು, ಅವರದೇ ಪೇಪರ್. ಸೋಲೂರು ಹೋಬಳಿ ಮಾಗಡಿಯಲ್ಲಿ ಉಳಿಸಬೇಕು. ಸೋಲೂರು ಉಳಿಸಿಕೊಳ್ಳಲು ಶಾಸಕರ ಹಿಂದೆ ನಾವೂ ಇರುತ್ತೇವೆ. ಆಗುವುದಿಲ್ಲ ಎಂದಾದರೆ ನೆಲಮಂಗಲ ಶಾಸಕರ ಮುಂದೆ ಮಾಗಡಿ ಶಾಸಕರು ಸೋಲೊಪ್ಪಿಕೊಳ್ಳಲಿ.ಎ.ಮಂಜುನಾಥ್ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net