

ಬಾಗೇಪಲ್ಲಿ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಏಳು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟರೆ ಬಾಗೇಪಲ್ಲಿ ಕ್ಷೇತ್ರವನ್ನು ಅಭಿವೃದ್ದಿಯತ್ತ ಕೊಂಡೊಯುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್ ಕಾಯಕರ್ತರಿಗೆ ಭರವಸೆ ನೀಡಿದರು.
ತಾಲೂಕಿನ ಪಾತಪಾಳ್ಯ, ನಾರೇಮದ್ದೇಪಲ್ಲಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಹಳ್ಳಿಯ ಕಡೆ ಸಂಸದರ ನಡೆ ಹಾಗೂ ಪಾತಪಾಳ್ಯ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಗೇಪಲ್ಲಿ ಕ್ಷೇತ್ರ ಅಭಿವೃದ್ಧಿ ವಂಚಿತವಾಗಿದ್ದು, ರಸ್ತೆ ನಿರ್ಮಾಣ, ವೈದ್ಯರ ನೇಮಕ, ಪಶು ಆಸ್ಪತ್ರೆ ಸಮಸ್ಯೆಗಳಿಗೆ ಪರಿಹಾರ, ಘಂಟಲಮಲ್ಲಮ್ಮ ಕಣಿವೆಯಲ್ಲಿ ಡ್ಯಾಂ ನಿರ್ಮಾಣ ಸೇರಿ ವಿವಿಧ ಬೇಡಿಕೆಗಳನ್ನು ಜನರು ಸಲ್ಲಿಸಿದ್ದಾರೆ. ಶ್ರೀರಾಮರೆಡ್ಡಿ ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿರುವುದು ಬಿಟ್ಟರೆ, ಕಾಂಗ್ರೆಸ್ ಶಾಸಕರು ಅಭಿವೃದ್ಧಿ ಬಗ್ಗೆ ಗಮನಹರಿಸಿಲ್ಲ ಎಂಬುದು ಕಾಣಿಸುತ್ತಿದೆ ಎಂದ ಸಂಸದರು ದಿವಂಗತ ಶಾಸಕ ಶ್ರೀರಾಮರೆಡ್ಡಿ ಅವರ ಗುಣಗಾನ ಮಾಡಿದರು.
ಆಸ್ಪತ್ರೆಗೆ ವೈದ್ಯರನ್ನು ನೇಮಿಸಿ ಎಂದರೆ ಸ್ಥಳೀಯ ಶಾಸಕರು ಅನಾರೋಗ್ಯಕ್ಕೆ ಕಾರಣವಾಗುವ ಮದ್ಯವನ್ನು ಪೂರೈಸುತ್ತಿದ್ದಾರೆ. ರಾಜ್ಯ ಸರ್ಕಾರ ನೀಡಿರುವ ಗುರಿ ಸಾಧಿಸುವ ಸಲುವಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.ಅಭಿವೃದ್ಧಿಯಿಂದ ದೂರ ಸರಿದಿರುವ ರಾಜ್ಯ ಸರ್ಕಾರ ಗುತ್ತಿಗೆದಾರರಿಂದ ಕಮಿಷನ್ ಪಡೆಯುವ ಬಗ್ಗೆ ಚಿಂತಿಸುತ್ತಿದೆ. ಮುಂದಿನ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟರೆ ಕ್ಷೇತ್ರದ ಅಭಿವೃದ್ಧಿಯ ಜವಾಬ್ದಾರಿಹೊರುತ್ತೇನೆ ಎಂದು ಸಂಸದ ಡಾ.ಕೆ. ಸುಧಾಕರ್ ಭರವಸೆ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಮಾಜಿ ಸದಸ್ಯ ಹರಿನಾಥರೆಡ್ಡಿ, ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪರೆಡ್ಡಿ, ತಾಪಂ ಮಾಜಿ ಸದಸ್ಯ ಗುಜ್ಜೇಪಲ್ಲಿ ಸುಧಾಕರರೆಡ್ಡಿ, ಗ್ರಾಪಂ ಸದಸ್ಯರಾದ ಸರೋಜಮ್ಮ, ಎನ್.ಶಿವಕುಮಾರ್, ಎನ್.ಮಂಜುನಾಥ, ಕೃಷ್ಣಮ್ಮ, ಆರ್.ಮಹೇಶ್, ಚಲಪತಿ, ಅಚ್ಚನಮ್ಮ, ಲಕ್ಷ್ಮೀದೇವಮ್ಮ, ಲಕ್ಷ್ಮೀನರಸಮ್ಮ, ಅಕಿಲಾ, ಸೀತಮ್ಮ, ಜಿ.ನರಸಿಂಹಮೂರ್ತಿ, ಅಶ್ವತ್ಥಪ್ಪ, ರಾಧಮ್ಮ, ಮುನಿರತ್ನಮ್ಮ, ಗಾಯತ್ರಿ ಮತ್ತಿತರರು ಇದ್ದರು.