ಸ್ವಚ್ಛತೆ ವಿಚಾರದಲ್ಲಿ ಪ್ರಭಾವಿಗಳು ಬಂದರೆ ಎಲ್ಲೆಡೆ ಪ್ರಚಾರ

ಸ್ವಚ್ಛತೆ ವಿಚಾರದಲ್ಲಿ ಪ್ರಭಾವಿಗಳು ಬಂದರೆ ಎಲ್ಲೆಡೆ ಪ್ರಚಾರ
Published on

ಹಾಸನ: ಪ್ಲಾಸ್ಟಿಕ್ ನಿರ್ಮೂಲನೆ, ಸ್ವಚ್ಛತೆ ಹಾಗೂ ಪರಿಸರಕ್ಕೆ ಹಾನಿ ಮಾಡುವ ವಿಚಾರದಲ್ಲಿ ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಲು ಮುಂದಾದಾಗ ಪ್ರಭಾವಿ ವ್ಯಕ್ತಿಗಳು ತಮ್ಮ ಅಧಿಕಾರ ಚಲಾಯಿಸಲು ಬಂದರೆ ಅಂತಹವರ ಆಡಿಯೋವನ್ನು ಮಾಧ್ಯಮಕ್ಕೆ ನೀಡುವುದಲ್ಲದೆ ಎಲ್ಲೆಡೆ ಪ್ರಚಾರ ಮಾಡುವುದಾಗಿ ಉಪ ಮೇಯರ್ ಹೇಮಾಲತಾ ಮತ್ತು ಪರಿಸರ ಪ್ರಭಾರ ಇಂಜಿನಿಯರ್ ಕವಿತಾ ಎಚ್ಚರಿಸಿದರು.

ನಗರದ ಕಸ್ತೂರಬಾ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಹೀ ಸೇವಾ ಅಭಿಯಾನದ ಏಕ ಬಳಕೆ ನಿಷೇಧಿತ ಪ್ಲಾಸ್ಟಿಕ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರ ಹಾಳು ಮಾಡುವವರನ್ನು ಸರಿ ದಾರಿಗೆ ತರುವುದು ನಮ್ಮ ಉದ್ದೇಶ. ಈ ಕರ್ತವ್ಯಕ್ಕೆ ಯಾರೂ ಅಡ್ಡಿಪಡಿಸಬೇಡಿ ಎಂದು ಮನವಿ ಮಾಡಿದರು.

ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಬ್ಯಾಗ್ ಉಪಯೋಗಿಸುವ ಅಭಿಯಾನ ಯಶಸ್ವಿಗೊಳ್ಳುತ್ತದೆ. ಯಾರೂ ಪ್ಲಾಸ್ಟಿಕ್ ಉಪಯೋಗಿಸಬಾರದು. ಇದರಿಂದ ಕಾಯಿಲೆ ಕಾಣಿಸಿಕೊಳ್ಳುತ್ತವೆ ಎಂದು ಎಚ್ಚರಿಸಿದರು. ಪ್ಲಾಸ್ಟಿಕ್ ಅನ್ನು ಸುಟ್ಟರೂ ಅದರ ಹೊಗೆ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದ ಅವರು, ಕಸವನ್ನು ಹಸಿ-ಒಣ ಎಂದು ಬೇರ್ಪಡಿಸಿ ವಿಲೇವಾರಿ ಮಾಡುವ ಮೂಲಕ ನಗರವನ್ನು ಗ್ರೀನ್ ಸಿಟಿ ಮಾಡಲು ಕೈಜೋಡಿಸಿ ಎಂದು ಮನವಿ ಮಾಡಿದರು.

ವ್ಯಾಪಾರಸ್ಥರು ಮತ್ತು ಗ್ರಾಹಕರು ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಬ್ಯಾಗ್ ಉಪಯೋಗಿಸಬೇಕು. ಇನ್ನು ಮುಂದೆ ಪ್ಲಾಸ್ಟಿಕ್ ಕಂಡುಬಂದರೆ ದಂಡದ ಜತೆಗೆ ಅಂಗಡಿ ವ್ಯಾಪಾರವನ್ನೇ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು. ಇದೇ ವೇಳೆ ಕಟ್ಟಿನಕೆರೆ ಮಾರುಕಟ್ಟೆ ವ್ಯಾಪಾರಿಗಳಿಗೆ ಬಟ್ಟೆ ಬ್ಯಾಗ್ ನೀಡಿ ಜಾಗೃತಿ ಮೂಡಿಸಿದರು. ನಂತರ ತಪಾಸಣೆ ಮಾಡಿದಾಗ ಅನೇಕ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಇರುವುದು ಕಂಡುಬಂತು. ಕೂಡಲೇ ಅದನ್ನು ವಶಕ್ಕೆ ಪಡೆದು, ಮುಂದೆ ಬಳಸಬೇಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net