

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ಚಿನ ಲೀಡ್ ಪಡೆಯದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರದೀಪ್ ಈಶ್ವರ್ ಅಯ್ಯರ್ ಸವಾಲೆಸೆದಿರುವುದು ರಾಜಕೀಯ ವಲಯದಲ್ಲಿ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ.
ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಪ್ರದೀಪ್ ಈಶ್ವರ್ ಶಾಸಕರಾಗಿ ಒಂದು ವರ್ಷ ಕಳೆದಿದೆ. ಇದರ ನಡುವೆ ಬಹಿರಂಗವಾಗಿ ಸವಾಲೊಡ್ಡಿ ಶಾಸಕ ಸ್ಥಾನವನ್ನು ಪಣಕ್ಕಿಟ್ಟಿದ್ದಾರೆ. ಇದರಲ್ಲಿ ಗೆಲ್ಲುತ್ತಾರೋ? ಸೋಲುತ್ತಾರೋ? ಮೊದಲು ನುಡಿದಂತೆ ನಡೆದುಕೊಳ್ಳುತ್ತಾರೆಯೇ? ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.
ಪ್ರಸಕ್ತ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್. ರಕ್ಷಾ ರಾಮಯ್ಯ ಮತ್ತು ಎನ್‌ಡಿಎ ಅಭ್ಯರ್ಥಿ ಡಾ. ಕೆ.ಸುಧಾಕರ್ ನಡುವೆ ನೇರ ಹಣಾಹಣಿ ನಡೆದಿದೆ. ಇಬ್ಬರ ಪರವಾಗಿಯೂ ಗೆಲುವಿನ ವಿಶ್ವಾಸ ವ್ಯಕ್ತವಾಗಿದ್ದು ಮತಗಳ ಅಂತರದ ಲೆಕ್ಕಾಚಾರ ಹಾಕಲಾಗುತ್ತಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಕ್ಕಬಳ್ಳಾಪುರದಲ್ಲಿ ಹೆಚ್ಚಿನ ಲೀಡ್ ಪಡೆಯುವ ವಿಚಾರದಲ್ಲಿ ರಾಜೀನಾಮೆಯ ವಿಚಾರದ ಪಂಥಾಹ್ವಾನ ಕೇಳಿ ಬಂದಿದೆ. ಅದರಲ್ಲೂ ಸ್ವಯಂ ಶಾಸಕರೇ ಬಹಿರಂಗ ಸವಾಲು ಹಾಕಿದ್ದಾರೆ. ಇದು ರಾಜಕೀಯ ವಲಯದಲ್ಲಿ ನಾನಾ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.
ಒಂಟಿ ಪ್ರಚಾರ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಸ್ವಪಕ್ಷೀಯ ಮುಖಂಡರನ್ನು ಬದಿಗಿಟ್ಟು ಏಕಾಂಗಿ ನಾಯಕತ್ವದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಪ್ರಚಾರ ಕೈಗೊಂಡಿದ್ದರು. ಇದಕ್ಕೆ ಸೀಮಿತ ಸಂಖ್ಯೆಯಲ್ಲಿ ಮಾತ್ರ ನಾಯಕರು ಸಾಥ್ ನೀಡಿದ್ದರು. ಇದರ ಭಿನ್ನಮತದ ನಡುವೆ ಕ್ಷೇತ್ರದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಲೀಡ್ ಪಡೆಯುವುದು ಪ್ರತಿಷ್ಠೆಯ ವಿಚಾರವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಪಕ್ಷಕ್ಕೆ ಲೀಡ್ ಸಿಗುವುದಿಲ್ಲ. ಬಿಜೆಪಿಯೇ ಮುಂಚೂಣಿಯಲ್ಲಿರುತ್ತದೆ ಎಂದು ಕಾಂಗ್ರೆಸ್ ವಲಯದ ಅನೇಕರು ಹೇಳುತ್ತಿದ್ದಾರೆ. ಮತ್ತೊಂದೆಡೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಮತದಾನ ದಿನಕ್ಕೆ ಎರಡು ದಿನ ಮೊದಲು ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ 2 ಸಾವಿರ ರೂ ಜಮಾ, ಪಕ್ಷದ ವೋಟ್ ಬ್ಯಾಂಕ್, ವಿವಿಧ ಸಮುದಾಯಗಳ ಬೆಂಬಲದಿಂದ ಕಾಂಗ್ರೆಸ್‌ಗೆ ಅನುಕೂಲವಾಗಿದೆ ಎಂತಲೂ ಕೆಲವರು ವಿಶ್ಲೇಷಿಸುತ್ತಿದ್ದಾರೆ.
ಲೀಡ್ ಸಿಗೋದು ಯಾರಿಗೆ?
ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ಸವಾಲಿನ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಅಸಲಿಗೆ ಲೀಡ್ ಪಡೆಯೋರು ಯಾರು ಎನ್ನುವ ಕುತೂಹಲದ ಪ್ರಶ್ನೆ ಕೇಳಿ ಬರುತ್ತಿದೆ.
ಎನ್‌ಡಿಎ ಅಭ್ಯರ್ಥಿ ಡಾ. ಕೆ.ಸುಧಾಕರ್ ಹುಟ್ಟೂರಿನ ಕ್ಷೇತ್ರ ಚಿಕ್ಕಬಳ್ಳಾಪುರ. ಇಲ್ಲಿ 2013, 2018 ರ ವಿಧಾನಸಭೆ ಮತ್ತು 2019ರ ಉಪ ಚುನಾವಣೆಯಲ್ಲಿ ದಾಖಲೆಗಳ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ, 2023ರ ಚುನಾವಣೆಯ ಸಂದರ್ಭದಲ್ಲಿ ಕೊನೇ ಕ್ಷಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗಟ್ಟಿನ ತಂತ್ರಗಾರಿಕೆ ಎದುರು ಸೋಲು ಕಂಡರು. ಇನ್ನು ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ಸುಧಾಕರ್ ಮತ ಗಳಿಕೆ ಪ್ರಮಾಣವು 70 ಸಾವಿರಕ್ಕಿಂತಲೂ ಹೆಚ್ಚು. ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಚಿಕ್ಕಬಳ್ಳಾಪುರದಲ್ಲಿ 2 ಲಕ್ಷ ಮತದಾರರಿದ್ದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಲದಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚಿನ ಮತಗಳು ಸಿಗುವ ಲೆಕ್ಕಾಚಾರ ಹಾಕಲಾಗಿದೆ. ನಗರ, ಪಟ್ಟಣ ಪ್ರದೇಶದ ಜತೆಗೆ ಗ್ರಾಮೀಣ ಭಾಗದಲ್ಲಿ ಸುಧಾಕರ್ ವೈಯಕ್ತಿಕ ವರ್ಚಸ್ಸಿನಿಂದ ಹೆಚ್ಚಿನ ಮತಗಳಿಕೆಯಾಗಿದೆ ಎನ್ನುವುದು ಅವರ ಬೆಂಬಲಿಗರ ಲೆಕ್ಕಾಚಾರ.
ಪ್ರದೀಪ್ ವಿಶ್ವಾಸದ ಲೆಕ್ಕ
ಹುಟ್ಟೂರು ಪೆರೇಸಂದ್ರದ ಜತೆಗೆ ಮಂಡಿಕಲ್ಲು, ಮಂಚೇನಹಳ್ಳಿ ಭಾಗದಲ್ಲಿ ಸುಧಾಕರ್ ಜತೆಯಲ್ಲಿದ್ದು ಅವರ ಪಕ್ಷದವರೇ ಕೈಕೊಟ್ಟಿದ್ದಾರೆ. ಏನೇ ಮಾಡಿದರೂ ಸಹ ಕಾಂಗ್ರೆಸ್ ಅಭ್ಯರ್ಥಿಗಿಂತಲೂ ಹೆಚ್ಚಿನ ಮತಗಳನ್ನು ಪಡೆಯುವುದಿಲ್ಲ ಎನ್ನುವುದು ಶಾಸಕ ಪ್ರದೀಪ್ ಈಶ್ವರ್ ವಿಶ್ವಾಸದ ನುಡಿ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಸುಧಾಕರ್ ಏನಾದರೂ ಕಾಂಗ್ರೆಸ್ ಅಭ್ಯರ್ಥಿಗಿಂತಲೂ ಒಂದು ಮತ ಹೆಚ್ಚಿಗೆ ಪಡೆದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅವರು ಸೋಲುತ್ತಾರೆ. ಎಂ.ಎಸ್.ರಕ್ಷಾ ರಾಮಯ್ಯ ಗೆಲ್ಲುತ್ತಾರೆ.
- ಪ್ರದೀಪ್ ಈಶ್ವರ್ ಅಯ್ಯರ್, ಶಾಸಕ, ಚಿಕ್ಕಬಳ್ಳಾಪುರ