

ಅರಸೀಕೆರೆ ಗ್ರಾಮಾಂತರ: ನಮ್ಮ ನಿರೀಕ್ಷೆಗಳು ಹೆಮ್ಮರದಂತೆ ಇದ್ದಾಗ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಅಖಿಲ ಭಾರತೀಯ ಜೀವ ವಿಮಾ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ರತ್ನಾಕರ್ ಪಟ್ನಾಯಕ್ ಅಭಿಪ್ರಾಯಪಟ್ಟರು.
2024-25 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅರಸೀಕೆರೆ ಶಾಖೆ ಭಾರತದಲ್ಲೇ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ನಗರದ ಜೀವ ವಿಮಾ ಕಚೇರಿಗೆ ಶನಿವಾರ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದ ಬಳಿಕ ನಿಗಮದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹುತೇಕ ಜನರು ಸಾಮಾನ್ಯ ರೀತಿಯಲ್ಲಿ ಬದುಕು ನಡೆಸುತ್ತಿದ್ದಾರೆ. ಆದರೆ, ಆರ್ಥಿಕವಾಗಿ ಸಬಲರಾಗಿರುವವರು ಈ ರೀತಿ ಇರುವುದಿಲ್ಲ. ನಮ್ಮ ವೃತ್ತಿಯನ್ನು ಪ್ರವೃತ್ತಿಯಾಗಿಸಿಕೊಳ್ಳಬೇಕು. ಬರುತ್ತಿರುವ ವರಮಾನವನ್ನು ದ್ವಿಗುಣಗೊಳಿಸಿಕೊಳ್ಳಬೇಕು ಎಂದರು. ಸ್ಥಳೀಯ ಶಾಖೆಯ ಪ್ರತಿನಿಧಿಗಳು ಹೆಚ್ಚಿನ ಹೊಣೆಗಾರಿಕೆ ಹೊರುವ ಜತೆಗೆ ಎಲ್‌ಐಸಿಗೆ ಲಾಭ ಬರುವಂತೆ ನೋಡಿಕೊಂಡು ಆರ್ಥಿಕ ಪ್ರಗತಿ ಸಾಧಿಸಿ ಎಂದು ಕಿವಿಮಾತು ಹೇಳಿದರು.
ವಿಭಾಗೀಯ ಅಧಿಕಾರಿ ಪುನೀತ್ ಕುಮಾರ್ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮ ದೇಶದಲ್ಲಿ ಮೂರನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಈ ನಿಟ್ಟಿನಲ್ಲಿ ಪ್ರತಿನಿಧಿಗಳ ಸಹಕಾರ ಮರೆಯುವಂತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಭಾಗೀಯ ವ್ಯವಸ್ಥಾಪಕಿ ಕೃಷ್ಣವೇಣಿ ಮಾತನಾಡಿ, ಪ್ರತಿನಿಧಿಗಳಾದ ಬಸವರಾಜು, ಪ್ರಶಾಂತ್ ನಾಯ್ಕ ಸೇರಿದಂತೆ ಹಲವರ ಶ್ರಮದ ಫಲವಾಗಿ ಗಿನ್ನೆಸ್ ದಾಖಲೆ ಬರೆಯಲು ಸಾಧ್ಯವಾಗಿದೆ ಎಂದರು.
ಶಾಖಾ ಪ್ರಬಂಧಕ ಋಷಿ ಚರಣ್ ಮಾತನಾಡಿ, ಕಳೆದ ವರ್ಷದ ರೀತಿಯಲ್ಲೇ ಈ ಬಾರಿಯೂ ಗುರಿಯನ್ನು ಡಿಸೆಂಬರ್ ತಿಂಗಳಲ್ಲಿ ಪ್ರಗತಿ ಮುಟ್ಟುತ್ತೇವೆ. ಮತ್ತೊಮ್ಮೆ ನಮ್ಮ ಮ್ಯಾನೇಜಿಂಗ್ ಡೈರೆಕ್ಟರ್ ರತ್ನಾಕರ್ ಪಟ್ನಾಯಕ್ ಅವರು ನಮ್ಮ ಶಾಖೆಗೆ ಬರಬೇಕು. ಇದಕ್ಕೆ ನಮ್ಮ ಪ್ರತಿನಿಧಿ ಮಿತ್ರರು ಸಹಕಾರ ಅತ್ಯಗತ್ಯ ಎಂದು ಹೇಳಿದರು. ಸಾಧನೆ ಮಾಡಿದ ಎಲ್ಲರಿಗೂ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಹುಬ್ಬಳ್ಳಿಗೆ ವರ್ಗಾವಣೆಯಾದ ಬಲವಂತ ಮಾರುತಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಿಂದ ಅಲಂಕೃತ ವಾಹನದಲ್ಲಿ ಗಣ್ಯರನ್ನು ಮೆರವಣಿಗೆ ಮಾಡಲಾಯಿತು.
ಮೈಸೂರಿನ ಮಾರ್ಕೆಟಿಂಗ್ ಮ್ಯಾನೇಜರ್ ಜೀವನ್‌ಕುಮಾರ್, ಮ್ಯಾನೇಜಿಂಗ್ ಸೇಲ್ಸ್ ಗುರುರಾಜ್, ಉಪ ಶಾಖಾಧಿಕಾರಿ ಶ್ರೀನಿವಾಸನ್ ಇತರರು ಇದ್ದರು.