

ಬೆಳ್ತಂಗಡಿ: ಉತ್ತಮ ವಾತಾವರಣ ಇರುವ ಶಾಲೆಗಳಲ್ಲಿ ಮಕ್ಕಳ ಕಲಿಕೆ ಉತ್ಸಾಹ ಹೆಚ್ಚಿರುತ್ತದೆ. ಅಂಕಗಳೇ ಮಾನದಂಡವಲ್ಲ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ತಕ್ಕ ಶಿಕ್ಷಣ ನೀಡಿ ಭವಿಷ್ಯ ನಿರ್ಮಿಸಲು ಸಾಧ್ಯವಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಹೇಳಿದರು.
ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಉಜಿರೆ ಹಳೆಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಗ್ರೀನ್ ಬೋರ್ಡ್ ಹಸ್ತಾಂತರಿಸಿ ಮಾತನಾಡಿದರು.
ಶಾಲೆಯ ಅಭಿವೃದ್ಧಿಗೆ ಮುತುವರ್ಜಿ ವಹಿಸಿದ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಪಾಲಕರ ಪಾತ್ರ ಮಹತ್ವದ್ದು. ಪಾಲಕರು ಶಾಲೆಗಳಿಗೆ ಆಗಾಗ ಭೇಟಿ ನೀಡಿ ಕುಂದು- ಕೊರತೆಗಳಿಗೆ ಸ್ಪಂದಿಸಬೇಕು ಎಂದರು.
ಬೆಳ್ತಂಗಡಿ ಬಿಇಒ ತಾರಕೇಸರಿ ಇಲಾಖೆಯ ವತಿಯಿಂದ ಮಕ್ಕಳಿಗೆ ಶೂ-ಸಾಕ್ಸ್ ವಿತರಿಸಿ ಮಾತನಾಡಿ, ಶಾಲಾ ಚಟುವಟಿಕೆಗಳಿಗೆ ಗ್ರೀನ್ ಬೋರ್ಡ್‌ಗಳು ಅಗತ್ಯವಾಗಿದ್ದು ತಾಲೂಕಿನ 179 ಸರ್ಕಾರಿ ಶಾಲೆಗಳ ಪೈಕಿ ಬೆರಳೆಣಿಕೆ ಶಾಲೆಗಳಲ್ಲಿ ಮಾತ್ರ ಈ ಸೌಲಭ್ಯವಿದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಕಿರಣ ಕಾರಂತ ಶುಭ ಹಾರೈಸಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಆರತಿ, ಮುಖ್ಯಶಿಕ್ಷಕಿ ಸಾವಿತ್ರಿ, ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ ರಾವ್, ಮಾಜಿ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು, ಪತ್ರಕರ್ತರ ಸಂಘದ ಉಪಾಧ್ಯಕ್ಷ ಶಿಬಿ ಧರ್ಮಸ್ಥಳ, ಖಜಾಂಚಿ ಪುಷ್ಪರಾಜ ಶೆಟ್ಟಿ, ಸದಸ್ಯರಾದ ಬಿ.ಎಸ್. ಕುಲಾಲ್, ಅರವಿಂದ ಹೆಬ್ಬಾರ್, ಸಂತೋಷ್ ಕೋಟ್ಯಾನ್, ಅಚುಶ್ರೀ ಬಾಂಗೇರು, ತುಕಾರಾಂ ಬಿ. ಉಪಸ್ಥಿತರಿದ್ದರು.ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿ ಮನೋಹರ ಬಳಂಜ ಕಾರ್ಯಕ್ರಮ ನಿರೂಪಿಸಿದರು.