

ಕೊಳ್ಳೇಗಾಲ: ಪಟ್ಟಣದ ಮುಡಿಗುಂಡದಲ್ಲಿ ನೂತನ ಸರ್ಕಾರಿ ಆದರ್ಶ ಪದವಿ ಪೂರ್ವ ಕಾಲೇಜು ವಿಜ್ಞಾನ ಮತ್ತು ವಾಣಿಜ್ಯ ವಿಭಾಗವನ್ನು ಶುಕ್ರವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಶಿಕ್ಷಣದ ದೃಷ್ಟಿಯಿಂದ ಸರ್ಕಾರಿ ಆದರ್ಶ ಕಾಲೇಜನ್ನು ಪ್ರಾರಂಭಿಸಲಾಗಿದೆೆ. ಕಾಲೇಜಿನಲ್ಲಿ ಉತ್ತಮ ಬೋಧನೆ ವ್ಯವಸ್ಥೆ ಕಲ್ಪಿಸಲಾಗಿದ್ದು, ವರ್ಷದ ಆರಂಭದಲ್ಲಿಯೇ ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಆದರ್ಶ ಕಾಲೇಜಿನ ಸದುಪಯೋಗವನ್ನು ಈ ಭಾಗದ ಮಕ್ಕಳು ಪಡೆದುಕೊಂಡು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು.
ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮುಡಿಗುಂಡ ಆದರ್ಶ ವಿದ್ಯಾಲಯ ಶೇ.100 ರಷ್ಟು ಫಲಿತಾಂಶ ನೀಡಿದೆ. ಆಗಾಗಿ ರಾಜ್ಯ ಸರ್ಕಾರ ಶಾಲೆಯ ಬಗ್ಗೆ ಪ್ರಶಂಸೆ ವ್ಯಕ್ತಪಿಡಿಸಿ ಮುಖ್ಯ ಶಿಕ್ಷಕರಿಗೆ ಅಭಿನಂದಿಸಿದೆ. ಇದೀಗ ಆದರ್ಶ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಮಕ್ಕಳು ಕಾಲೇಜು ಶಿಕ್ಷಣಕ್ಕೆ ಆದರ್ಶ ಕಾಲೇಜಿನಲ್ಲಿಯೇ ಸೇರುವ ಅವಕಾಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಕಾಲೇಜು ಶಿಕ್ಷಣ ಇಲಾಖೆ ಉಪನಿರ್ದೇಶಕಿ ಪುಟ್ಟಗೌರಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ನಗರಸಭೆ ಅಧ್ಯಕ್ಷ ರೇಖಾರಮೇಶ್, ಸದಸ್ಯರಾದ ನಾಗಸುಂದ್ರಮ್ಮ, ಪುಷ್ಪಲತಾ, ಮಂಜುನಾಥ್, ನಗರಸಭೆ ನಾಮ ನಿರ್ದೇಶಿತ ಸದಸ್ಯರಾದ ಸ್ವಾಮಿನಂಜಪ್ಪ, ಅನ್ಸರ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಆದರ್ಶ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾಗರಾಜು, ಆದರ್ಶ ಶಾಲೆಯ ಮುಖ್ಯ ಶಿಕ್ಷಕಿ ಪ್ರಿಯದರ್ಶಿನಿ, ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಕಾಶ್ ಹಾಗೂ ಮಕ್ಕಳು ಇತರರು ಇದ್ದರು.