

ಹಿರೀಸಾವೆ: ನನಗೆ ನಿಲ್ಲಲು ಆಗಲ್ಲ, ಆದರೆ ಬುದ್ಧಿಶಕ್ತಿ ಇದೆ, ವಾಕ್ ಚಾತುರ್ಯವಿದೆ. ಈ ದೇಹದಲ್ಲಿ ಶಕ್ತಿ ಇರುವವರೆಗೂ ನನ್ನ ನಂಬಿರುವ ಜನತೆಗಾಗಿ ಹೋರಾಟ ಮಾಡ್ತಿನಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಪಟ್ಟಣದ ಶ್ರೀ ಚೌಡೇಶ್ವರಿ ಮುಖ್ಯ ದ್ವಾರದ ಬಳಿ ಲೋಕಸಭೆ ಚುನಾವಣೆ ಹಿನ್ನೆಲೆ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಹೋಬಳಿ ಮಟ್ಟದ ಸಭೆ ಉದ್ಘಾಟಿಸಿ ಮಾತನಾಡಿ, ನನ್ನ ಈ ಜೀವ ಹಾಗೂ ಜೀವನ ನಾಡಿನ ಜನತೆಗೆ ಮೀಸಲು ಎಂದರು.
60 ವರ್ಷಗಳು ರಾಜಕೀಯ ಹೋರಾಟ ಮಾಡಿ ಈಗ ಬಿಜೆಪಿ ಜತೆ ಏಕೆ ಹೋಗಿದ್ದೀರಿ ಎಂಬ ಪ್ರಶ್ನೆಯನ್ನು ಕೆಲವರು ಕೇಳುತ್ತಾರೆ. ವಿರೋಧಿಗಳು ನನ್ನನ್ನು ಹಂಗಿಸುತ್ತಾರೆ. ಕೇಳಲು ಅವರಿಗೆ ಅಧಿಕಾರವಿದೆ, ಕೇಳಲಿ. ನನಗೆ ಅದರ ಬಗ್ಗೆ ಬೇಸರವಿಲ್ಲ ಎಂದರು.
1996 ರಲ್ಲಿ ನನ್ನನ್ನು ಅಧಿಕಾರದಿಂದ ತೆಗೆಯಲಾಯಿತು. ಅದನ್ನು ಬಿಟ್ಟು ಬೇರೇನು ಮಾಡಲು ಆಗಲಿಲ್ಲ. ನನ್ನ ಅವಧಿಯಲ್ಲಿ ಏನೆಲ್ಲ ಯೋಜನೆಗಳನ್ನು ತಂದು ಅಭಿವೃದ್ಧಿಪಡಿಸಿದ್ದೇನೆ ಎಂಬುದು ನನಗೆ ಗೊತ್ತು. ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ತಪ್ಪು ಹಾಗೂ ಭ್ರಷ್ಟಾಚಾರ ಮಾಡಿಲ್ಲ ಎಂಬುದು ನನ್ನ ಶತ್ರುಗಳಿಗೂ ಅರಿವಿದೆ. ಆದರೆ ಅದನ್ನು ಯಾರೂ ಹೇಳುವುದಿಲ್ಲ. ಸತ್ಯ ಹೇಳಲು ಆತ್ಮದಲ್ಲಿ ಯಾವುದೇ ಕಳಂಕ ಇರಬಾರದು ಎಂದರು.
ಅವತ್ತಿನ ಕಾಲದಲ್ಲಿಯೇ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಕಾಂಗ್ರೆಸ್ ನಾಯಕರು ತೀರ್ಮಾನ ಮಾಡಿದ್ದರು. ಅವರಿಂದ ಆಗಲಿಲ್ಲ. ಯಾಕೆಂದರೆ ನಾನು ಮಾಡುವ ಕೆಲಸದಲ್ಲಿ ಲೋಪವಿರಲಿಲ್ಲ. ಜನಪರವಾದ ಕೆಲಸ ಮಾಡಿದ್ದೇನೆ. ಸತ್ಯವಾಗಿಯೇ ನಡೆದುಕೊಂಡು ಬಂದಿದ್ದೇನೆ ಎಂದು ಹೇಳಿದರು.
ದೇಶದಲ್ಲಿ ಸಮಸ್ಯೆ ಎದುರಾದ ವೇಳೆ ಹೋರಾಡಿದ್ದೇನೆ. ನಾನು ಪ್ರಧಾನಿಯಾದ ವೇಳೆ 2 ಬಾರಿ ಹೋಗಿ ಅಲ್ಲಿನ ಸಮಸ್ಯೆ ಬಗೆಹರಿಸಿದೆ. ಈ ದೇಶದ ಏಳು ರಾಜ್ಯಗಳಿಗೆ ಜವಾಹರ್ ಲಾಲ್ ನೆಹರು ಹೋಗಲಿಲ್ಲ. ನಾನು ಹೋಗಿ 6300 ಕೋಟಿ ರೂ. ನೀಡಿ 7 ರಾಜ್ಯಗಳ ಅಭುದ್ಯಯಕ್ಕೆ ಕಾರಣನಾಗಿದ್ದೇನೆ ಎಂಬ ಹೆಗ್ಗಳಿಕೆ ನನಗಿದೆ ಎಂದರು.
ಇವತ್ತು ಹಾಸನ ಜಿಲ್ಲೆಯ ಜನಕ್ಕೆ ಕುಡಿಯುವ ನೀರಿಲ್ಲ. ಆದರೆ, ಸ್ಟಾಲಿನ್ ಅವರು ಕಾವೇರಿ ನೀರನ್ನು ನಮಗೆ ಮಾತ್ರ ಬೇಕು ಕರ್ನಾಟಕಕ್ಕೆ ಕೊಡಬಾರದು ಎಂದು ವರ್ತಿಸುವುದು ಸರಿಯಲ್ಲ. ನಾನು ದೆಹಲಿಗೆ ಹೋಗಿ ವಕೀಲನನ್ನು ಭೇಟಿ ಮಾಡಿ ಬಂದಿದ್ದೇನೆ. ಹೋರಾಟದ ಛಲವಿದೆ ಆದರೆ ನಮಗೆ ಅಧಿಕಾರವಿಲ್ಲ. ನನಗೆ 91 ವಯಸ್ಸು, ದೇವರು ಇನ್ನೂ ಎಷ್ಟು ದಿನ ಆಯಸ್ಸು ಕೊಡ್ತಾನೆ ಗೊತ್ತಿಲ್ಲ ಎಂದರು.
ರಾಜ್ಯ ಸರ್ಕಾರದ 2 ಸಾವಿರ ರೂ. ಗ್ಯಾರಂಟಿ ಇರಲಿ ನಮ್ಮ ಬೆಂಗಳೂರಿನ ಜನ ಕುಡಿಯುವ ನೀರಿನ ಸಲುವಾಗಿ ತಲಾ ಒಂದು ಟ್ಯಾಂಕರ್‌ಗೆ ಎರಡುವರೆ ಸಾವಿರ ರೂ. ಕೊಡುತ್ತಿದ್ದಾರೆ. ನಿಮ್ಮ ಗ್ಯಾರಟಿಗಳನ್ನು ನಾನು ವಿರೋಧ ಮಾಡಲ್ಲ, ಆದರೆ ಜನಸಾಮಾನ್ಯರ ದೈನಂದಿನ ಬದುಕಿಗೆ ನೆರವಾಗುವ ಯೋಜನೆಗಳನ್ನು ಜಾರಿಗೊಳಿಸಿ. ಇಲ್ಲವಾದರೆ ನಾಡಿನ ಜನತೆ ಬೀದಿಗೆ ಬೀಳಬೇಕಾಗುತ್ತದೆ. ಆಗ ನಾನು ಸಹ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರನ್ನು ಕಳೆದ ಬಾರಿ 53 ಸಾವಿರ ಮತಗಳಿಂದ ಗೆಲ್ಲಿಸಿದ್ದೀರಿ. ಆದರೆ ಈ ಬಾರಿ ಗ್ಯಾರಂಟಿಯ ಮೋಸದಿಂದ ಆರು ಸಾವಿರ ಲೀಡ್‌ಗೆ ತಂದಿದ್ದೀರಿ. ಲೋಕಸಭಾ ಚುನಾವಣೆಯಲ್ಲಿ ಆ ರೀತಿ ಮಾಡದೆ ಮೋದಿ ಅಭಿವೃದ್ಧಿ ಹಾಗೂ ನಮ್ಮ ಕಾರ್ಯವೈಖರಿ ಅರಿತು ಹೆಚ್ಚಿನ ಅಂತರದಲ್ಲಿ ಗೆಲುವು ತಂದು ಕೊಡಬೇಕು ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಮಾತನಾಡಿ, ಕಳೆದ 5 ವರ್ಷದ ಅವಧಿಯಲ್ಲಿ ಹತ್ತಾರು ಯೋಜನೆಗಳನ್ನು ತಂದು ಕ್ಷೇತ್ರ ಅಭಿವೃದ್ಧಿಪಡಿಸಿದ್ದೇನೆ. ರಸ್ತೆ, ನೀರಾವರಿ, ಗ್ರಂಥಾಲಯ, ಅಂಗನವಾಡಿ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಸಾಕಷ್ಟು ಅನುದಾನ ನೀಡಿದ್ದೇನೆ. ಪಾತಾಳಕ್ಕೆ ಕುಸಿದಿದ್ದ ಕೊಬ್ಬರಿ ದರವನ್ನು ಮೇಲೆತ್ತಲು ದೇವೇಗೌಡರ ಮಾರ್ಗದರ್ಶನದಲ್ಲಿ ಸಾಕಷ್ಟು ಪಯತ್ನ ಮಾಡಿ, ನಫೆಡ್ ಮೂಲಕ ಖರೀದಿ ವ್ಯವಸ್ಥೆಮಾಡಿ ಟನ್‌ಗೆ 12 ಸಾವಿರ ರೂ. ರೈತರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ದೇಶಕ್ಕೆ ಮೋದಿ ಮತ್ತೊಮ್ಮೆ ಬೇಕು ಎಂದರು.
ಶಾಸಕರಾದ ಎಚ್.ಡಿ.ರೇವಣ್ಣ, ಸಿ.ಎನ್.ಬಾಲಕೃಷ್ಣ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪುಟ್ಟರಾಜು, ಬಿಜೆಪಿ ಮುಖಂಡ ಶ್ರೀಕಂಠಪ್ಪ ಮಾತನಾಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಪರಮದ ದೇವರಾಜೇಗೌಡ, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್, ಮಹೇಶ್, ಎಚ್.ಈ.ಬೋರಣ್ಣ, ಎಂ.ಆರ್.ವಾಸಣ್ಣ, ನರಿಹಳ್ಳಿ ತಾತೇಗೌಡ, ಕೋಟಿ ಚಂದ್ರು, ತೋಟಿ ನಾಗರಾಜ್, ಎ.ಜಿ.ಪ್ರಭಾಕರ್, ರಮೇಶ್, ಶ್ರೀಕಂಠಪ್ಪ ಹಾಗೂ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.