ಪರಿಹಾರ ನೀಡುವ ಹೊಣೆಯನ್ನು ನಾನು ಹೊರುತ್ತೇ; ಹೆಚ್.ಡಿ. ದೇವೇಗೌಡ ಹೇಳಿಕೆ

ಪರಿಹಾರ ನೀಡುವ ಹೊಣೆಯನ್ನು ನಾನು ಹೊರುತ್ತೇ; ಹೆಚ್.ಡಿ. ದೇವೇಗೌಡ ಹೇಳಿಕೆ
Published on

ಹಾಸನ: ತಾಲೂಕಿನ ಮೊಸಳೆಹೊಸಳ್ಳಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ 10 ಕುಟುಂಬಸ್ಥರಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡುವ ಹೊಣೆಯನ್ನು ನಾನು ಹೊರುತ್ತೇನೆಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಮ್ಮದು ಪ್ರಾದೇಶಿಕ ಪಕ್ಷವಾಗಿದ್ದು, ಹಣ ಇರಲಿ ಅಥವಾ ಇಲ್ಲದೇ ಇರಲಿ ಪರಿಹಾರ ತಲುಪಿಸುವ ಜವಾಬ್ದಾರಿ ನನ್ನ ಮೇಲಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಘಟನೆ ನಡೆದ ದಿನವೇ ಆಸ್ಪತ್ರೆಗೆ ಬಂದು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದರು. ಆದರೆ, ಆರ್ಥಿಕ ನೆರವಿನ ಕುರಿತು ಅವರು ಏನೂ ಹೇಳಿರಲಿಲ್ಲ. ಈಗ ಎಲ್ಲರೂ ಸೇರಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದು ಮೃತ ಕುಟುಂಬಕ್ಕೆ ತಲಾ 1 ಲಕ್ಷ ರೂ., ಗಂಭೀರ ಗಾಯಾಳುಗಳಿಗೆ 25 ಸಾವಿರ ರೂ., ಮಧ್ಯಮ ಗಾಯಾಳುಗಳಿಗೆ 20 ಸಾವಿರ ರೂ. ಹಾಗು ಸಣ್ಣಪುಟ್ಟ ನೋವಿನಿಂದ ಬಳಲುತ್ತಿರುವವರಿಗೆ 15 ಸಾವಿರ ರೂ. ನೀಡಲಾಗುವುದೆಂದರು.

ಮೃತರ ಕುಟುಂಬದವರ ಮಾಹಿತಿಯನ್ನು ಜಿಲ್ಲಾಧಿಕಾರಿ ನಮಗೆ ನೀಡಿದರೆ ಹಣ ತಲುಪಿಸುತ್ತೇವೆ. ಜಿಲ್ಲಾಡಳಿತವೇ ತಲುಪಿಸುವುದಾದರೆ ಅವರಿಗೆ ಹಣ ನೀಡಲು ಸಿದ್ಧರಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ರೂ., ಪ್ರಧಾನಿ ನರೇಂದ್ರ ಮೋದಿ ಅವರು 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ರಾಜ್ಯ ಸರ್ಕಾರ ಪರಿಹಾರ ಮೊತ್ತ ಹೆಚ್ಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ರಸ್ತೆ ಅಪಘಾತಕ್ಕೆ ಪರಿಹಾರ ನಿಗದಿಪಡಿಸಲು ಕಾನೂನು ಇದೆ. ಅದನ್ನು ಮೀರಿ ಏನೂ ಮಾಡಲು ಸಾಧ್ಯವಿಲ್ಲವೆಂದರು.

ಶಾಸಕ ಹೆಚ್.ಪಿ. ಸ್ವರೂಪ್, ಜೆಡಿಎಸ್, ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್, ಎಚ್‌ಡಿಸಿಸಿ ಬ್ಯಾಂಕ್ ನಿರ್ದೆಶಕ ಹೊನ್ನವಳ್ಳಿ ಸತೀಶ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಾಮಿಗೌಡ ಇದ್ದರು.

ಮೃತಪಟ್ಟ ಕುಟುಂಬಕ್ಕೆ ಸಾಂತ್ವನ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಮೊಸಳೆಹೊಸಳ್ಳಿಬಳಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಮೃತಪಟ್ಟ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಹೊಳೆನರಸೀಪುರ ತಾಲೂಕಿನ ಕಬ್ಬಿನಳ್ಳಿ ಗ್ರಾಮದ ಪ್ರವೀಣ್ ಹಾಗೂ ಕುಮಾರ್ ಹಾಗೂ ಡಣಾಯಕನಹಳ್ಳಿ ಗ್ರಾಮದ ಈಶ್ವರ್ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಇದೇ ಸಂದರ್ಭ ಮೃತಪಟ್ಟ ಈಶ್ವರ್ ಸಹೋದರ ದೀಕ್ಷಿತ್ ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಂಡರು.

ಇಂಜಿನಿಯರಿಂಗ್ ಕಾಲೇಜು ವೀಕ್ಷಣೆ: ಮೊಸಳೆ ಹೊಸಳ್ಳಿ ದುರಂತ ಸ್ಥಳ ವೀಕ್ಷಿಸಿದ ನಂತರ, ನೂತನವಾಗಿ ನಿರ್ಮಾಣವಾಗುತ್ತಿರುವ ಇಂಜಿನಿಯರಿಂಗ್ ಕಾಲೇಜು ಹಾಗೂ ಬಾಲಕರ ವಿದ್ಯಾರ್ಧಿ ನಿಲಯ ವೀಕ್ಷಿಸಿದರು. ಇದೇ ಕಾಲೇಜಿನಲ್ಲಿ ಓದುತ್ತಿದ್ದ ಮೂವರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net