ನಾನು ಕೂಡ ಬಂಕಾಪೂರದಲ್ಲಿ ಬಾಳು ಮಾಮಾನ ಕುರಿ ಕಾದಿದ್ದೇನೆ: ಬಸವರಾಜ ಬೊಮ್ಮಾಯಿ

Untitled-1
ಹಾನಗಲ್​ ಕ್ಷೇತ್ರದ ಶೀಗೇಹಳ್ಳಿಯಲ್ಲಿ ಅಭ್ಯರ್ಥಿ ಶಿವರಾಜ ಸಜ್ಜನರ್ ಪರವಾಗಿ ಮತ ಯಾಚಿಸಿದ ಸಿಎಂ ಬಸವರಾಜ ಬೊಮ್ಮಾಯಿ
Published on

ಹಾನಗಲ್(ಯಳವಟ್ಟಿ): ಕಂಬಳಿ ಮತ್ತು ಹಾಲು‌ಮತದ ಕುರಿತ ವಾಕ್ಸಮರಕ್ಕೆ ಸಂಬಂಧಿಸಿದಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ನಾನು ಕೂಡ ಬಂಕಾಪುರದಲ್ಲಿ ಮಹಾರಾಷ್ಟ್ರದ ಬಾಳು ಮಾಮಾನ ಕುರಿ ಕಾದಿದ್ದೇನೆ ಎಂದು ಹೇಳಿದರು.

ಹಾನಗಲ್ಲ ವಿಧಾನಸಭಾ ಕ್ಷೇತ್ರದ ಯಳವಟ್ಟಿ ಗ್ರಾಮದಲ್ಲಿ ಇಂದು ಬೈಕ್​ ರ‌್ಯಾಲಿ ಮತ್ತು ರೋಡ್ ಶೋ ನಡೆಸಿದ ನಂತರ ಅವರು ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ನಾನು ಹಾಲುಮತ ಸಮುದಾಯದಲ್ಲಿ ಹುಟ್ಟಿದ್ದೇನೆ. ಆದರೆ ಬಸವರಾಜ ಬೊಮ್ಮಾಯಿ ಅವರು ಹಾಲುಮತದವರಾ ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ಆದರೆ ಯಾರಾದರೂ ಅರ್ಜಿ ಹಾಕಿ ಹುಟ್ಟುತ್ತಾರಾ ಎಂದು ಸಿಎಂ ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಹಾಲುಮತದ ಸಮುದಾಯಕ್ಕೆ ಯಾರ ಕೊಡುಗೆ ಎಷ್ಟು? ಹಾಲುಮತದ ಸಮುದಾಯದವರ ಅಭಿವೃದ್ಧಿಗೆ ಯಾರು ಶ್ರಮಿಸಿದ್ದಾರೆ ಎಂಬುದು ಮುಖ್ಯ. ನನ್ನ ಕ್ಷೇತ್ರದ ಬಾಡ ಗ್ರಾಮವನ್ನು ನಾನು ಅಭಿವೃದ್ಧಿ ಪಡಿಸಿದ್ದೇನೆ. ಕನಕದಾಸರ ಸ್ಮರಣೆ ಸದಾ ಮಾಡುತ್ತೇನೆ. ಪ್ರಾಧಿಕಾರ ರಚನೆಯ ಮೂಲಕ ಯಡಿಯೂರಪ್ಪ ಅವರು ಆರ್ಥಿಕ ನೆರವು ನೀಡಿದ್ದಾರೆ. ಹೀಗಾಗಿ ಈ ಸಮುದಾಯಕ್ಕೆ ಯಾರು ಎಷ್ಟು ಕೊಡುಗೆ ನೀಡಿದ್ದಾರೆ ಎಂಬುದನ್ನು ಜನ ಅರಿತುಕೊಳ್ಳಬೇಕು ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಹಾನಗಲ್ ತಾಲ್ಲೂಕಿನಲ್ಲಿ 12 ಸಾವಿರ ಕಾರ್ಮಿಕರಿಗೆ ಕಿಟ್ ಕೊಡಲಾಗಿದೆ. ತಾಲೂಕಿನಲ್ಲಿ ಅತಿ ಹೆಚ್ಚು ಲಸಿಕೆ ಹಾಕಲಾಗಿದೆ. ಪ್ರಧಾನಿ ಮೋದಿಜೀಯವರ ನೇತೃತ್ವದಲ್ಲಿ 8 ತಿಂಗಳಿಂದ ಉಚಿತ ರೇಷನ್, ಉಚಿತ ಲಸಿಕೆ ದೇಶದ ನಾಗರಿಕರಿಗೆ ನೀಡಲಾಗಿದೆ. ಹೂ ಹಣ್ಣು ಮಾರಾಟಗಾರರಿಗೆ, ರೈತರಿಗೆ, ಟ್ಯಾಕ್ಸಿ, ರಿಕ್ಷಾ ಚಾಲಕರಿಗೆ ಪರಿಹಾರಧನ ನೀಡುವ ಮೂಲಕ ಬಿ.ಎಸ್‌. ಯಡಿಯೂರಪ್ಪನವರು ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸಿದ್ದಾರೆ.

ಕಾಂಗ್ರೆಸ್​​ನವರು ಹಾನಗಲ್ ತಾಲೂಕು ಅಭವೃದ್ಧಿ ಬಗ್ಗೆ ಮಾತನಾಡದೇ ಜಾತಿಗಳ ನಡುವೆ ಜಗಳ ಹಚ್ಚಿ ತಮ್ಮ ಕಾರ್ಯಸಾಧನೆಗೆ ನಿಲ್ಲುತ್ತಾರೆ. ಚುನಾವಣೆಯಲ್ಲಿ ಗೆಲವು ಸಿಗಲಿದೆ ಎನ್ನುವ ಭ್ರಮೆ ಕಾಂಗ್ರೆಸ್ ಅವರದು. ನೈತಿಕತೆ ಇಲ್ಲದ, ಅಶಿಕ್ಷಿತ ಚಿಂತನೆಗಳನ್ನೇ ಹೊಂದಿರುವ ಕಾಂಗ್ರೆಸ್‌ನವರ ಯಾವುದೇ ಆಮಿಷಗಳಿಗೆ ಯುವಕರು ಬಲಿಯಾಗುವುದಿಲ್ಲ. ಯುವಕರು ಸ್ವಾಭಿಮಾನಿಗಳಾಗಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಬಡವರ ಕಳಕಳಿ ಇರುವ ಬಿಜೆಪಿ ಪಕ್ಷವನ್ನು ವಿಜಯಶಾಲಿಯಾಗಿಸುವ ನಂಬಿಕೆ ಇದೆ. ಸಿ.ಎಂ. ಉದಾಸಿಯವರೊಂದಿಗೆ ಕೆಲಸ ಮಾಡಿದ ಅನುಭವವಿರುವ ಶಿವರಾಜ ಸಜ್ಜನರ್ ಅವರು 25 ಸಾವಿರ ಮತಗಳ ಅಂತರದಿಂದ ಜಯಗೊಳಿಸುತ್ತಾರೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net