

ಹಾನಗಲ್: ಕಾಂಗ್ರೆಸ್ ಪಕ್ಷದವರು ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ. ಮನುಷ್ಯ-ಮನಸ್ಸುಗಳ ಮಧ್ಯ ಅಶಾಂತಿ ಸೃಷ್ಟಿಸಿ, ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಅವರು ಇಂದು ಹಾನಗಲ್ ವಿಧಾನಸಭಾ ಕ್ಷೇತ್ರದ ಮಕರವಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜಾತಿ-ಜಾತಿಗಳ ನಡುವೆ ದ್ವೇಷ ಬಿತ್ತಿ, ಜಾತಿಗಳಲ್ಲಿ ನೂರಾರು ಉಪಜಾತಿಗಳನ್ನು ಸೃಷ್ಟಿಸಿ ಸಮಾಜದಲ್ಲಿ ಅಲ್ಲೋಲ-ಕಲ್ಲೋಲ ಉಂಟುಮಾಡಿದ್ದಾರೆ. ಮನುಷ್ಯರು ಮನಸುಗಳ ಮಧ್ಯೆ ಗೋಡೆ ಎಬ್ಬಿಸಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಆರೋಪ ಮಾಡಿದರು.
ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಹಾನಗಲ್ ಅಭಿವೃದ್ಧಿಗೆ ಕೊಡುಗೆ ಶೂನ್ಯ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಕಳುಹಿಸಿ ಎಂದು ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪನವರು ಮುಖ್ಯಮಂತ್ರಿ, ನಾನು ಜಲಸಂಪನ್ಮೂಲ ಸಚಿವ ಮತ್ತು ಉದಾಸಿ ಅವರು ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದಾಗ ತಿಳವಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದೇವೆ. ನಂತರದಲ್ಲಿ ಬಂದ ಕಾಂಗ್ರೆಸ್ ಸರ್ಕಾರ ಯಾವುದೇ ಕೆಲಸವನ್ನು ಮಾಡಲಿಲ್ಲ. ಈ ಕ್ಷೇತ್ರಕ್ಕೆ ಕನಿಷ್ಠ ಪಕ್ಷ ಒಂದು ಸಣ್ಣ ಶಾಲೆಯನ್ನು ಸಹ ಅವರಿಂದ ಕಟ್ಟಲಾಗಿಲ್ಲ ಎಂದರು.
ಸುಮಾರು 513 ಕೋಟಿ ರೂ. ಮೊತ್ತದ ಕಾಮಗಾರಿಗೆ ಅಡಿಗಲ್ಲು ಹಾಕಲು ಕಾಂಗ್ರೆಸ್ನವರು ಮುಂದಾಗಿದ್ದರು, ಆ ಅನುದಾನದಲ್ಲಿ ರೂ. 425 ಕೋಟಿ ಸಿಎಂ ಉದಾಸಿ ಅನುಮೋದನೆ ನೀಡಿದ್ದ ಅನುದಾನವಾಗಿತ್ತು. ಅಧಿಕಾರದಲ್ಲಿದ್ದಾಗ ಇಲ್ಲಿನ ಜನರನ್ನು ಇಲ್ಲಿನ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷ ಮಾಡಿದ ಕಾಂಗ್ರೆಸ್ ಪಕ್ಷ ಚಿನ್ನದ ತಟ್ಟೆಯಲ್ಲಿ ನಿಮಗೆ ಅಭಿವೃದ್ಧಿ ತೋರಿಸುವ ಸುಳ್ಳು ಆಶ್ವಾಸನೆ ಹೊತ್ತು ತಂದಿದ್ದಾರೆ ಎಂದು ಸಿಎಂ ಹೇಳಿದರು.
ಕಾಂಗ್ರೆಸ್ನವರು ಎಲ್ಲೋ ಮೂಲೆಯಲ್ಲಿ ಕಿಟ್ ವಿತರಿಸಿ ಕೋವಿಡ್ ಸಂದರ್ಭದಲ್ಲಿ ಅದ್ಭುತವಾದ ಕೆಲಸ ಮಾಡಿದ್ದೇವೆ ಎಂದು ಬಿಂಬಿಸುತ್ತಿದ್ದಾರೆ. ಕೋವಿಡ್ ಸಂಕಷ್ಟವನ್ನು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಮರ್ಥವಾಗಿ ಎದುರಿಸಿದ್ದೇವೆ. ಸಿಎಂ ಉದಾಸಿ ಅವರ ನೇತೃತ್ವದಲ್ಲಿ 15 ಸಾವಿರಕ್ಕೂ ಹೆಚ್ಚು ಕಿಟ್ಗಳನ್ನು ಹಾನಗಲ್ ತಾಲೂಕಿನಲ್ಲಿ ವಿತರಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹಾನಗಲ್ನಲ್ಲಿ ಶೇಕಡ 80ರಷ್ಟು ಮೊದಲ ಹಂತದ ಲಸಿಕೆಯನ್ನು ನೀಡಲಾಗಿದೆ. ಕೋವಿಡ್ ಸಮಯದಲ್ಲಿ ಉಚಿತವಾಗಿ ಪಡಿತರ ಹಾಗೂ ದೇಶದ ಜನತೆಗೆ ಉಚಿತವಾಗಿ ವ್ಯಾಕ್ಸಿನ್ ನೀಡಿದ್ದು ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರ ಎಂದು ಸಿಎಂ ಹೇಳಿದರು.
ನೀವು ನೀಡುವ ಪ್ರತಿಯೊಂದು ಮತಕ್ಕೂ ಗೌರವವಿದೆ, ಅದಕ್ಕೆ ಬೆಲೆ ಬರಬೇಕು. ನಿಮ್ಮ ಮತದ ಗೌರವವನ್ನು ಭಾರತೀಯ ಜನತಾ ಪಕ್ಷ ಕಾಪಾಡುತ್ತದೆ. ಶಿವರಾಜ್ ಸಜ್ಜನ್ ಅವರಿಗೆ ಹಾನಗಲ್ ಅಭಿವೃದ್ಧಿಪಡಿಸಲು, ಇಲ್ಲಿನ ಜನಸಾಮಾನ್ಯರ ಸೇವೆ ಮಾಡಲು ಅವಕಾಶ ನೀಡಿ ಎಂದು ಹಾನಗಲ್ ಕ್ಷೇತ್ರದ ಜನತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.