ಕಾರು ನಂದೇ, ನಂಬರ್​ ಪ್ಲೇಟ್​ ಚೇಂಜ್​ ಮಾಡಿದ್ದು ಗೊತ್ತಿಲ್ಲ!

Published on

ಬಿಡದಿ:ಬೆಂಗಳೂರಿನ ಸದಾಶಿವನಗರದಲ್ಲಿನ ಡಿಸಿಎಂ ಡಿ.ಕೆ.ಶಿವಕುಮಾರ್​ ಅವರ ಮನೆಯ ಬಳಿ ನಕಲಿ ನಂಬರ್​ ಪ್ಲೇಟ್​ನ ಕಾರೊಂದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಮಾಲೀಕ, ಮಾಜಿ ಶಾಸಕ ಎ.ಮಂಜುನಾಥ್​ ಸ್ಪಷ್ಟನೆ ನೀಡಿದ್ದಾರೆ.

ಬಿಡದಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿಸಿಎಂ ಮನೆ ಮುಂದೆ ಪತ್ತೆಯಾಗಿರುವ ಕಾರು ನನ್ನ ಹೆಸರಿನಲ್ಲಿದೆ. ಚುನಾವಣಾ ಸಂದರ್ಭದಲ್ಲಿ ಮಾಗಡಿಯ ಅಂದಿನ ಸ್ನೇಹಿತ ಕೃಷ್ಣಮೂರ್ತಿ ಅವರಿಗೆ ಓಡಾಟ ಮಾಡಲೆಂದು ನೀಡಿದ್ದೆ. ಆದರೆ ಅವರು ಚುನಾವಣೆ ಮುಗಿದ ಬಳಿಕ ಕಾರನ್ನು ಹಿಂತಿರುಗಿಸದೆ, ಅದರಲ್ಲೇ ಓಡಾಟ ಮಾಡುತ್ತಿದ್ದರು. ಆದರೆ ನಕಲಿ ನಂಬರ್​ ಪ್ಲೇಟ್​ ಬಳಸಿ, ಸಂಚಾರ ಮಾಡುತ್ತಿರುವುದು ನನ್ನ ಗಮನಕ್ಕಿಲ್ಲ. ವಕೀಲರ ಮೂಲಕ ವಾಹನದ ದಾಖಲಾತಿಗಳನ್ನು ಪೊಲೀಸರಿಗೆ ಕಳುಹಿಸಿ ಕೊಡಲಾಗಿದ್ದು, ನಕಲಿ ನಂಬರ್​ ಪ್ಲೇಟ್​ ಏಕೆ ಅಳವಡಿಕೆ ಮಾಡಲಾಗಿತ್ತು ಎಂಬುದರ ಬಗ್ಗೆ ತನಿಖೆಯಾಗಲಿ ಎಂದರು.

ಸಂಚಾರ ಪೊಲೀಸರಿಂದ ತನಿಖೆ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರ ಸದಾಶಿವನಗರದ ನಿವಾಸದ ಸಮೀಪದಲ್ಲಿ ಇತ್ತೀಚೆಗೆ ಪತ್ತೆಯಾದ ನಕಲಿ ನಂಬರ್​ ಪ್ಲೇಟ್​ ಅಳವಡಿಸಿದ್ದ ಕಾರು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ. ಮಂಜುನಾಥ್​ ಹೆಸರಿನಲ್ಲಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಆ ಕಾರನ್ನು ಜೆಡಿಎಸ್​ನ ಮಾಜಿ ಕಾರ್ಯಕರ್ತ, ಹಾಲಿ ಕಾಂಗ್ರೆಸ್​ ಕಾರ್ಯಕರ್ತ ಕೃಷ್ಣಮೂರ್ತಿ ಎಂಬುವರು ಬಳಸುತ್ತಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net