ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ, ಹಳ್ಳ- ಕೊಳ್ಳ ಸುತ್ತಾಡಿ ಬಂದೆ

NRD GURJI POOJE
Published on

ನರಗುಂದ: ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಪಟ್ಟಣದ ಸೋಮಾಪೂರ ಬಡಾವಣೆಯ ಮಹಿಳೆಯರು ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ಮಂಗಳವಾರ ಗುರ್ಜಿ ಪೂಜೆ ಮಾಡಿದರು.


ಮಣ್ಣಿನಿಂದ ನಿರ್ಮಿಸಿದ ಗುರ್ಜಿಯನ್ನು ತಲೆ ಮೇಲೆ ಹೊತ್ತು ಪಟ್ಟಣದ ಮನೆಮನೆಗೆ ತೆರಳಿ ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ, ಹಳ್ಳ- ಕೊಳ್ಳ ಸುತ್ತಾಡಿ ಬಂದೆ, ಕಾರ ಮಳೆಯೆ, ಕಪ್ಪತ ಮಳೆಯೆ, ಸುರಿ ಸುರಿಯೋ ಮಳೆರಾಯ. ಬಣ್ಣ ಕೊಡತೇನಿ ಬಾ ಮಳೆಯೆ, ಸುಣ್ಣ ಕೊಡತಿನಿ ಸುರಿ ಮಳೆಯೇ ಎಂದು ವಿವಿಧ ಜಾನಪದ ಹಾಡುಗಳನ್ನು ಹಾಡುತ್ತ ಮೈಮೇಲೆ ನೀರು ಹಾಕಿಸಿಕೊಂಡರು.


ನಗರದ ಪ್ರತಿ ಮನೆಯಲ್ಲೂ ವಿವಿಧ ಧವಸ- ಧಾನ್ಯ, ಹಿಟ್ಟು, ಉಳ್ಳಾಗಡ್ಡಿ, ಮೆಣಸಿನಕಾಯಿ, ಉಪ್ಪು ಪದಾರ್ಥ ಸಂಗ್ರಹಿಸಿ ಸೋಮಾಪೂರ ಭಾಗದ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.


ಗುರ್ಜಿ ಪೂಜೆಯಲ್ಲಿ ಪಾಲ್ಗೊಂಡಿದ್ದ ರೈತ ಮಹಿಳೆ ಶರಣವ್ವ ಬೇವಿನಕಟ್ಟಿ ಮಾತನಾಡಿ, ಮುಂಗಾರು ಮಳೆಯ ನೀರಿಕ್ಷೆಯಲ್ಲಿದ್ದ ತಾಲೂಕಿನ ರೈತರು ಜಮೀನನ್ನು ಹದಗೊಳಿಸಿದ್ದಾರೆ. ಕೆಲವರು ಒಣ ಮಣ್ಣಿನಲ್ಲಿಯೇ ಹೆಸರು ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ, ಇದುವರೆಗೂ ಮಳೆ ಸುರಿದಿಲ್ಲ. ಒಣ ಮಣ್ಣಿನಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಬಿಸಿಲಿನ ಪ್ರಖರತೆಗೆ ಒಣಗಿ ಹೋಗುತ್ತಿರುವುದರಿಂದ 5 ದಿನಗಳ ಕಾಲ (ಶುಕ್ರವಾರದವರೆಗೆ) ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರ್ಜಿ ಹೊತ್ತು ಸಂಚರಿಸಿ, ದೇವರನ್ನು ಪ್ರಾರ್ಥಿಸಲಾಗುತ್ತದೆ. ಹೀಗೆ ಮಾಡಿದರೆ ಸಮೃದ್ಧ ಮಳೆಯಾಗುತ್ತದೆ ಎಂಬ ನಂಬಿಕೆ ನಮ್ಮ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.


ಚೈತ್ರಾ ಹುಲಜೋಗಿ, ಗಂಗವ್ವ ತಳವಾರ, ಗೀತಾ ಹುಲಜೋಗಿ, ರತ್ನಾ ಕಾಲವಾಡ, ರೇಣವ್ವ ಹಿರೇನಿಂಗನಗೌಡ್ರ, ಸಂಗನಬಸವ್ವ ಕನ್ನೂರ, ಯಂಕವ್ವ ತಿಗಡಿ, ಬಸವ್ವ ಮರಿಯಣ್ಣವರ, ಬಸವ್ವ ಗುಗ್ಗರಿ, ಪದ್ಮಾ ಮೋಟೆ, ಪಾರವ್ವ ಮೋಟೆ, ಸುನಂದಾ ಕಾಲವಾಡ, ರತ್ನಾ ಪೂಜಾರ, ರುದ್ರವ್ವ ಪಾಟೀಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net