ಮೋಜಿಗಾಗಿ ಫ್ರೆಂಡ್ಸ್​ ಮುಂದೆಯೇ ತುಂಗಭದ್ರ ನದಿಗೆ ಹಾರಿದ್ದ ಹೈದರಬಾದ್​ ಮೂಲದ ವೈದ್ಯೆ ಶವವಾಗಿ ಪತ್ತೆ! Hyderabad Doctor

Hyderabad Doctor
Published on

Hyderabad Doctor: ಹೈದರಾಬಾದ್ ಮೂಲದ ಮಹಿಳಾ ವೈದ್ಯೆ ಅನನ್ಯಾ ರಾವ್ ಎಂಬುವರು ಕರ್ನಾಟಕ ಪ್ರವಾಸದ ವೇಳೆ ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ಹಂಪಿಯಲ್ಲಿ ನಡೆದಿದೆ.

ಪೊಲೀಸ್​ ಮೂಲಗಳ ಪ್ರಕಾರ, ಡಾ. ಅನನ್ಯಾ ರಾವ್ ಮತ್ತು ಇತರೆ ಇಬ್ಬರು ಸ್ನೇಹಿತರಾದ ಸತ್ವಿನ್ ಮತ್ತು ಹಶಿತಾ ಜತೆ ಹಂಪಿಗೆ ಪ್ರವಾಸಕ್ಕೆಂದು ಬಂದಿದ್ದರು. ಸ್ಮಾರಕಗಳಿಗೆ ಭೇಟಿ ನೀಡಿದ ನಂತರ, ಮಂಗಳವಾರ ರಾತ್ರಿ ಸಣಾಪುರ ಗ್ರಾಮದ ಅತಿಥಿ ಗೃಹದಲ್ಲಿ ತಂಗಿದ್ದರು. ಬುಧವಾರ ಮಧ್ಯಾಹ್ನ ಮೂವರು ಈಜಲೆಂದು ತುಂಗಭದ್ರಾ ನದಿಗೆ ಹೋದರು.

ಇದೇ ಸಂದರ್ಭದಲ್ಲಿ ಅನನ್ಯಾ ರಾವ್ ಸುಮಾರು 25 ಅಡಿ ಎತ್ತರದ ಬಂಡೆಯಿಂದ ನೀರಿಗೆ ಹಾರಿ ಈಜಲು ಬಯಸಿದರು. ಬಂಡೆಯಿಂದ ನೀರಿಗೆ ಹಾರಿದ ಅನನ್ಯಾ ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಈಜುತ್ತಿದ್ದರು. ಆದರೆ, ಶೀಘ್ರದಲ್ಲೇ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಕೊಚ್ಚಿಕೊಂಡು ಹೋದರು. ಈ ವೇಳೆ ಆಕೆಯನ್ನು ಉಳಿಸಲು ಸ್ನೇಹಿತರು ಪ್ರಯತ್ನಿಸಿದರು. ಆದರೆ, ಅವರ ಪ್ರಯತ್ನಗಳು ವ್ಯರ್ಥವಾಯಿತು.

ಘಟನೆ ನಡೆದ ಸ್ಥಳದಲ್ಲಿರುವ ಬಂಡೆಯ ಗುಹೆಗಳಿಂದ ತುಂಗಭದ್ರಾ ನದಿ ಹರಿಯುತ್ತದೆ. ಯುವತಿ ಬಂಡೆಯ ಗುಹೆಗಳಲ್ಲಿ ಸಿಲುಕಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಹೀಗಾಗಿ ಗಂಗಾವತಿ ಗ್ರಾಮೀಣ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಸ್ಥಳೀಯ ಡೈವರ್‌ಗಳು ಮತ್ತು ಅಗ್ನಿಶಾಮಕ ದಳದ ನೆರವಿನಿಂದ ಸಂಜೆಯವರೆಗೆ ಹುಡುಕಿದರೂ ಆಕೆಯ ಯಾವುದೇ ಕುರುಹು ಪತ್ತೆಯಾಗಲಿಲ್ಲ.

ಗುರುವಾರ ಬೆಳಗ್ಗೆ ಅನನ್ಯಾ ರಾವ್ ಅವರ ಶವವನ್ನು ಹೊರತೆಗೆಯಲಾಗಿದೆ. ಈ ಸುದ್ದಿ ತಿಳಿದು ಅನನ್ಯಾ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಇದರ ನಡುವೆ ಅನನ್ಯಾ ನದಿಗೆ ಹಾರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net