

ಹೂವಿನಹಡಗಲಿ: ಮದ್ರಾಸ್ ಐ, ಕಣ್ಣು ಬೇನೆಗೆ ಸೂಕ್ತ ಆರೈಕೆ ಮುಖ್ಯ ಎಂದು ಹೊಳಲು ಪಿಎಚ್‌ಸಿ ನೇತ್ರಾಧಿಕಾರಿ ಕೆ.ಶ್ರೀಕಾಂತ ತಿಳಿಸಿದರು.
ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಮದ್ರಾಸ್ ಐ ಮತ್ತು ಕಣ್ಣು ಬೇನೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನೂ ಓದಿ: ಹವಾಮಾನ ವೈಪರೀತ್ಯ ಕಣ್ಣು ಬೇನೆ ವಿಪರೀತ
ಕೆಲ ದಿನಗಳಿಂದ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಮದ್ರಾಸ್ ಐ, ಕಣ್ಣು ಬೇನೆ ವಿಪರೀತವಾಗಿ ಹರಡುತ್ತಿದ್ದು, ಕಣ್ಣು ಕೆಂಪಾಗಿ ಉರಿ ಬರುವುದು ಹಾಗೂ ತುರಿಕೆ ಮತ್ತು ಕಣ್ಣಲ್ಲಿ ನೀರು ಬರುವುದು ಸೋಂಕಿನ ಲಕ್ಷಣಗಳಾಗಿವೆ. ಕಣ್ಣು ಬೇನೆ ಬಂದರೆ ಪದೇಪದೆ ಉಜ್ಜದೆ ಹತ್ತಿರದ ಆಸ್ಪತ್ರೆಗೆ ತೆರಳಿ ನೇತ್ರತಜ್ಞರಿಂದ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ಸೊಂಕು ಕಂಡುಬಂದ ಮಕ್ಕಳನ್ನು ಮನೆಗೆ ಕಳಿಸಿ ವಿಶ್ರಾಂತಿ ಪಡೆಯಲು ತಿಳಿಸಬೇಕು.
ಬಳಸಿದ ಬಟ್ಟೆ, ಸೋಪು ಹಾಗೂ ಇತರ ವಸ್ತುಗಳನ್ನು ಇನ್ನೊಬ್ಬರು ಉಪಯೋಗಿಸಬಾರದು ಎಂದು ತಿಳಿಸಿದರು. ಉಪಪ್ರಾಚಾರ್ಯ ಲಿಂಗಪ್ಪ ಕೆ, ಶಿಕ್ಷಕರಾದ ಕೊಟ್ರೇಶ್, ಸುರೇಖಾ ಅಂಗಡಿ, ಶಾಮಸುಂದರ್, ಗುರುಪ್ರಸಾದ್ ಇತರರಿದ್ದರು.