ಎಷ್ಟೇ ಸಂಧಾನ ಮಾಡಿದ್ರೂ ಸಹಿಸದ ಮನಸ್ಸು: ಹೊಂಚು ಹಾಕಿ ಮಲಗಿದ್ದ ಪತ್ನಿಯನ್ನೇ ಕೊಂದ ಪತಿರಾಯ!

Wife
Published on

ಮೈಸೂರು: ಅನೈತಿಕ ಸಂಬಂಧ ಸಂಶಯ ಹಿನ್ನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದಿರುವ ಘಟನೆ ಹುಣಸೂರಿನ ಕಲ್ಕುಣಿಕೆ ಹೌಸಿಂಗ್​ ಬೋರ್ಡ್​ ಕಾಲನಿಯಲ್ಲಿ ನಡೆದಿದೆ.

ಸೌಮ್ಯ (30) ಕೊಲೆಯಾದ ಮಹಿಳೆ. ಆರೋಪಿ ಪತಿ ರವಿ ಹಾಗೂ ಸೌಮ್ಯ 11 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರ ವೈವಾಹಿಕ ಜೀವನ ಸಾಕ್ಷಿಯಾಗಿ ಇಬ್ಬರು ಗಂಡು ಮಕ್ಕಳು ಸಹ ಇದ್ದಾರೆ. ರವಿಗೆ ಇತ್ತೀಚೆಗೆ ತನ್ನ ಪತ್ನಿಯ ನಡತೆಯ ಮೇಲೆ ಸಂಶಯ ಶುರುವಾಗಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವೂ ನಡೆದಿತ್ತು. ಅನೇಕ ಬಾರಿ ಇಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಸಂಧಾನ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದರು.

ಆದರೆ, ರವಿಗೆ ಸೌಮ್ಯಳ ಮೇಲಿನ ಸಂಶಯ ಮಾತ್ರ ಹೋಗಲಿಲ್ಲ. ಪತ್ನಿಯ ಮೇಲೆ ದಿನ ಕಳೆದಂತೆ ರಾಕ್ಷಸನಾಗಿದ್ದ ರವಿ ಕಳೆದ ಭಾನುವಾರ ರಾತ್ರಿ ಮಲಗಿರುವಾಗ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದಿರುವ ಆರೋಪ ಕೇಳಿಬಂದಿದೆ. ಇದಕ್ಕೂ ಮುನ್ನ ಉಸಿಗಟ್ಟಿಸಿದಾಗ ಪತ್ನಿ ಮೃತಪಟ್ಟಿಲ್ಲವೇನೋ ಅಂದುಕೊಂಡು ವೇಲ್​ನಿಂದ ಬಿಗಿದು ಸಾಯಿಸಿ, ಅಲ್ಲಿಂದ ಪರಾರಿಯಾಗಿದ್ದಾನೆ.

ಸೋಮವಾರ ಬೆಳಗ್ಗೆ ಮನೆಯ ಬಾಗಿಲು ತೆರೆಯದಿದ್ದನ್ನು ನೋಡಿ ಅನುಮಾನಗೊಂಡ ಸ್ಥಳೀಯರು ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲು, ಸ್ಥಳಕ್ಕೆ ಆಗಮಿಸಿದ ಅವರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ತನಿಖೆ ಆರಂಭಿಸಿದ್ದಾರೆ. ತಲೆಮರೆಸಿಕೊಂಡಿರುವ ರವಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net