

ಕೊಳ್ಳೇಗಾಲ: ಶೀಲ ಶಂಕಿಸಿ ತನ್ನ ಪತ್ನಿಯನ್ನೇ ಕೊಲೆಗೈದಿದ್ದ ಪ್ರಕರಣದಲ್ಲಿ ಆತನ ಮಗನೆ ತಂದೆ ಮಾಡಿದ ಕೊಲೆಗೆ ಸಾಕ್ಷಿ ಹೇಳಿದ್ದು, ಇದೀಗ ಅಪರಾಧಿಗೆ ಕೊಳ್ಳೇಗಾಲದ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ಜೀವಾವಧಿ ಸೆರೆವಾಸ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ನಿವಾಸಿ ಕುಮಾರ್ ಶಿಕ್ಷೆಗೆ ಗುರಿಯಾದವನು. ಈತ ಸುಮಾರು 10 ವರ್ಷಗಳ ಹಿಂದೆ ಮುಳ್ಳೂರು ಗ್ರಾಮದ ಬೈರಸ್ವಾಮಿ( ಸಾಕ್ಷಿ-1) ಎಂಬುವರ ಅಕ್ಕನಾದ ಚಿನ್ನಮ್ಮಳನ್ನು ಮದುವೆಯಾಗಿದ್ದನು. ಕುಮಾರ್ ತನ್ನ ಹೆಂಡತಿ ಚಿನ್ನಮ್ಮಳ ಶೀಲದ ಮೇಲೆ ವಿನಾಕಾರಣ ಅನುಮಾನಪಟ್ಟು ಅವರಿವರನ್ನು ನೋಡುತ್ತಿಯಾ ಎಂದು ಹೊಡೆಯುವುದು, ಬಡಿಯವುದು ಮಾಡಿ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದನು. ಇದರಿಂದ ಬೇಸರಗೊಂಡ ಚಿನ್ನಮ್ಮ ಮುಳ್ಳೂರಿನಲ್ಲಿರುವ ತನ್ನ ತವರು ಮನೆಗೆ ಹೋಗಿ ಅಲ್ಲಿಯೇ ಉಳಿದುಕೊಂಡಿದ್ದಳು. 2022 ಮಾ.31ರಂದು ಕುಮಾರ್ ಮುಳ್ಳೂರಿಗೆ ಹೋಗಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ಚೆನ್ನಾಗಿ ನೋಡಿಳ್ಳುವುದಾಗಿ ಚಿನ್ನಮ್ಮಳ ತಂದೆ ಕಾಮರಾಜನಾಯಕ( ಸಾಕ್ಷಿ-3) ಮತ್ತು ತಾಯಿ ರಾಜಮ್ಮ( ಸಾಕ್ಷಿ-4) ಅವರಿಗೆ ತಿಳಿಸಿ ಪತ್ನಿಯನ್ನು ತನ್ನ ಮಗ ದರ್ಶನ್(ಸಾಕ್ಷಿ-2) ಸಮೇತ ಮುಡಿಗುಂಡಕ್ಕೆ ಕರೆತಂದಿದ್ದನು.
2022ರ ಏ.1 ರಂದು ಬೆಳಗ್ಗೆ 4.15ರಲ್ಲಿ ಕುಮಾರ್ ಗಲಾಟೆ ಮಾಡಿ ಚಿನ್ನಮ್ಮಳ ಕಪಾಳಕ್ಕೆ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದು, ಈ ಘಟನೆಯನ್ನು ನೋಡಿ ಕೂಗಿಕೊಂಡ ಮಗ ದರ್ಶನ್‌ನನ್ನು ಕೊಠಡಿಗೆ ಕೂಡಿ ಹಾಕಿದ್ದ. ಈ ಬಗ್ಗೆ ಕೊಳ್ಳೇಗಾಲದ ಸಿಪಿಐ ಶಿವರಾಜ್ ಆರ್. ಮುಧೋಳ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಕುಮಾರನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಅವರು ಅಪರಾಧಿಗೆ ಕುಮಾರ್ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೆ, ದರ್ಶನ್ ಮೈನರ್ ಆಗಿದ್ದು, ಆತನ ಪೋಷಣೆಗೆ ಕಾನೂನು ಸೇವಾ ಪ್ರಾಧಿಕಾರದಿಂದ ಸೂಕ್ತ ಪರಿಹಾರಕ್ಕೆ ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ ಮತ್ತು ಸಿ.ಬಿ ಗಿರೀಶ್ ಅವರು ವಿಚಾರಣೆ ನಡೆಸಿ ವಾದ ಮಂಡಿಸಿದರು.