

ಬೆಂಗಳೂರು: ಮಲಗಿದ್ದ ಪತ್ನಿಯ ಕತ್ತು ಕೊಯ್ದು ಹತ್ಯೆ ಮಾಡಿ ಅಮಾಯಕನಂತೆ ನಾಟಕವಾಡಿದ್ದ ಪತಿಯ ನಿಜ ಬಣ್ಣ ಪೊಲೀಸರ ತನಿಖೆಯಲ್ಲಿ ಬಯಲಾಗಿ ಜೈಲು ಸೇರಿದ್ದಾನೆ. ಹೊಂಗಸಂದ್ರ ಸಮೀಪದ ಶ್ರೀನಿವಾಸ ಲೇಔಟ್ ನಿವಾಸಿ ವೆಂಕಟಲಕ್ಷ್ಮೀ (26) ಮೃತಳು. ಈಕೆಯ ಪತಿ ಸುರೇಶ್ (30) ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪುಟ್ಟ ಬಾಲಕ ಅನಾಥ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ, ತಾಯಿ ವೆಂಕಟಲಕ್ಷ್ಮಿ ಕೊಲೆಯಾದರೆ, ಪತ್ನಿಯನ್ನು ಕೊಂದ ಆರೋಪದ ಮೇಲೆ ಸುರೇಶ್ ಜೈಲು ಸೇರಿದ್ದಾನೆ. ಇವರ ನಡುವಿನ ಜಗಳದಲ್ಲಿ 4 ವರ್ಷದ ಬಾಲಕ ಅನಾಥನಾಗಿದ್ದಾನೆ.
6 ವರ್ಷದ ಹಿಂದೆ ವೆಂಕಟಲಕ್ಷ್ಮೀ ಮತ್ತು ಟೈಲರ್ ಸುರೇಶ್ ಮದುವೆ ಆಗಿದ್ದರು. ಈ ದಂಪತಿಗೆ 4 ವರ್ಷದ ಮಗನಿದ್ದು, ಹೊಂಗಸಂದ್ರದಲ್ಲಿ ನೆಲೆಸಿದ್ದರು. ಮನೆ ಸಮೀಪದಲ್ಲೇ ಸುರೇಶ್ ಟೈಲರಿಂಗ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ಭಾನುವಾರ(ಜೂ.7) ರಾತ್ರಿ ಸಹ ದಂಪತಿ ನಡುವೆ ಜಗಳವಾಗಿದೆ. ಬಿರಿಯಾನಿ ಊಟ ಮಾಡಿ ಸುರೇಶ್, ಮಗನೊಂದಿಗೆ ರೂಮಲ್ಲಿ ಮಲಗಿದ್ದ. ನಡುಮನೆಯಲ್ಲಿ ವೆಂಕಟಲಕ್ಷ್ಮಿ ನಿದ್ದೆಗೆ ಜಾರಿದ್ದಳು. ತಡರಾತ್ರಿ 3 ಗಂಟೆಯಲ್ಲಿ ಸುರೇಶ್ ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಆ ನಂತರ ಬೆಳಗ್ಗೆ 6 ಗಂಟೆಯಲ್ಲಿ ಹೆಂಡತಿಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಕೂಗಿಕೊಂಡು ಸಹಾಯಕ್ಕೆ ಕರೆದಿದ್ದ.
ಮನೆ ಮಾಲೀಕ ಬಂದಾಗ ರಕ್ತದ ಮಡುವಿನಲ್ಲಿ ವೆಂಕಟಲಕ್ಷ್ಮೀ ಬಿದ್ದಿದ್ದಳು. ಮನೆ ಮಾಲೀಕನೇ ನಮ್ಮ-100ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದ. ಪೊಲೀಸರು ಶವವನ್ನು ತೆರವು ಮಾಡಿ ಸುರೇಶ್ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಮೊದಲು ಆಕೆಯೇ ಚಾಕುವಿನಿಂದ ಕೊಯ್ದುಕೊಂಡಿದ್ದಾಳೆ ಎಂದು ಹೇಳಿದ್ದ. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಒಪ್ಪಿಕೊಂಡಿದ್ದಾನೆ. ಕೌಟುಂಬಿಕ ಕಲಹ ಎಂಬುದು ಬಿಟ್ಟರೇ ಹತ್ಯೆಗೆ ನಿಜ ಕಾರಣವೇನೆಂದು ಹೇಳುತ್ತಿಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.