

ಚಿಕ್ಕೋಡಿ: ಕುಡಿತಕ್ಕೆ ಹಣ ಕೊಡುತ್ತಿಲ್ಲ ಎಂದು ಹೆಂಡತಿಯನ್ನು ಕೊಲೆ ಮಾಡಿದ್ದ ವ್ಯಕ್ತಿ ಬಳಿಕ ಪಾಪಪ್ರಜ್ಞೆ ಕಾಡಿ ಒಂದೇ ವಾರದಲ್ಲಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಳವ್ವ ಮುತ್ತೆಪ್ಪ ಬಿರಾಜ್ (33) ಕೊಲೆಯಾದ ಮಹಿಳೆ. ಮುತ್ತೆಪ್ಪ ಬಿರಾಜ್ ಕೊಲೆ ಮಾಡಿದ ಪತಿ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದ್ಯವ್ಯಸನಿಯಾಗಿದ್ದ ಈತ ಪತ್ನಿ ಕುಡಿತಕ್ಕೆ ಹಣ ನೀಡುತ್ತಿಲ್ಲ ಎಂದು ಸಿಟ್ಟಿನಿಂದ ಆಕೆಯ ತಲೆಗೆ ಒನಕೆಯಿಂದ ಹೊಡೆದು ಕೊಲೆ ಮಾಡಿದ್ದ. ಕಳೆದ ಮಂಗಳವಾರ ಈ ಪ್ರಕರಣ ನಡೆದಿತ್ತು.
ಕೊಲೆ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ ಈತ ಇಂದು ತನ್ನ ತೋಟದ ಪಕ್ಕದ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.