ವಾಟ್ಸ್‌ಆಪ್ ಸಂದೇಶದಲ್ಲಿ ತಲಾಖ್ ನೀಡಿದ ಗಂಡ

Triple Talaq
Published on

ಪಡುಬಿದ್ರಿ: ಪತಿ ಹಾಗೂ ಅವರ ಮನೆಯವರು ಸೇರಿ ವರದಕ್ಷಿಣೆ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ತೆಂಕ ಗ್ರಾಮದ ಸುಹಾನ ಎಂಬುವರು ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತೆಂಕ ಗ್ರಾಮದ ಮುಬೀನ್ ಶೇಖ್ ಎಂಬುವರಿಗೆ 12.5 ಪವನ್ ಚಿನ್ನಾಭರಣ, 20 ಲಕ್ಷ ರೂ. ಖರ್ಚು ಮಾಡಿ 2024ರಲ್ಲಿ ಸುಹಾನ ಅವರನ್ನು ಮದುವೆ ಮಾಡಿ ಕೊಡಲಾಗಿತ್ತು. ಪತಿ ಮನೆಯಲ್ಲಿ ಒಂದು ತಿಂಗಳವರೆಗೆ ಒಳ್ಳೆಯ ರೀತಿಯಲ್ಲಿ ಸಂಸಾರ ನಡೆಸಿಕೊಂಡು ಬಂದಿದ್ದ ಬಳಿಕ ಪತಿ ಮುಬೀನ್ ಶೇಖ್, ಮಾವ ಉಮ್ಮರ್ ಸಾಹೇಬ್, ಅತ್ತೆ ಅಬೀದ, ಮೈದುನ ಮುಕ್ತಾರ್, ನಾದಿನಿ ರಿಹಾನ, ರಶೀನ್, ರಿಹಾನಳ ಗಂಡ ಶಾಹೀದ್ ಸೇರಿ ವಿನಾ ಕಾರಣ ಮಾನಸಿಕ, ದೈಹಿಕ ಕಿರುಕುಳ ನೀಡಲಾರಂಭಿಸಿದ್ದರು.

ಸುಹಾನ ತಂದೆ ಮನೆಗೆ ಬಂದಾಗ ನಾದಿನಿ ರಶೀನ್ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೆ, ಪ್ರಶ್ನಿಸಿದಕ್ಕೆ ಕೈಯಿಂದ ಹಲ್ಲೆ ನಡೆಸಿದ್ದಾರೆ. 2024 ಡಿ.12ರಂದು ಪತಿ ವಿದೇಶಕ್ಕೆ ಹೋದ ಬಳಿಕ ಅವರ ಮನೆಯವರು ಚಿನ್ನ, ಹಣ ತರುವಂತೆ ಪೀಡಿಸಿ ಜೀವ ಬೆದರಿಕೆ ಹಾಕಿದ್ದಾರೆ. 2025 ಜು.15ರಂದು ಪತಿ ಮೊಬೈಲ್‌ನಿಂದ ಸುಹಾನ ಮೊಬೈಲ್‌ಗೆ ವಾಟ್ಸ್‌ಆಪ್ ಸಂದೇಶದ ಮೂಲಕ ನಾನು ನಿನಗೆ ತಲಾಖ್ ನೀಡುತ್ತೇನೆಂದು ಹೇಳಿ ಮೂರು ಬಾರಿ ತಲಾಖ್ ಎಂದು ಉಚ್ಚರಿಸಿ ವಿಚ್ಛೇದನ ನೀಡಿರುತ್ತಾರೆ. ಅಲ್ಲದೆ ಬೇರೆ ಮದುವೆ ಎಂದು ಹೇಳಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net