

ಧಾರವಾಡ: ಒಬ್ಬಳು ಹೆಂಡತಿ ಇರುವಾಗಲೇ ಇನ್ನೊಬ್ಬಳನನ್ನು ಮದವೆಯಾಗಲು ಹೊರಟವನನ್ನು ಮೊದಲ ಪತ್ನಿಯು ಸ್ಥಳಕ್ಕೇ ತೆರಳಿ ತಡೆದಿದ್ದಾಳೆ. ಆ ಮೂಲಕ ಒಬ್ಬಳಿಗೆ ಕೈಕೊಟ್ಟು ಇನ್ನೊಬ್ಬಳ ಕೈಹಿಡಿಯಲು ಹೋದವನಿಗೆ ಎರಡನೇ ಮದುವೆ ಅವಕಾಶ ಸದ್ಯಕ್ಕೆ ಕೈತಪ್ಪಿಹೋಗಿದೆ.
ಬೆಳಗಾವಿ ಜಿಲ್ಲೆ ಕಿತ್ತೂರ ಮೂಲದ ಡ್ಯಾನಿಷ್ ಎರಡನೇ ಮದುವೆಯಾಗಲು ಮುಂದಾದ ವ್ಯಕ್ತಿ. ಈತನಿಗೆ ರಾಜಬಿ ಮನಿಯಾರ್ ಎಂಬಾಕೆಯ ಜತೆಗೆ ಈಗಾಗಲೇ ಮದುವೆಯಾಗಿದೆ. ಒಂಬತ್ತು ವರ್ಷಗಳ ಹಿಂದೆ ಮದುವೆ ಆಗಿರುವ ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. ಅದಾಗ್ಯೂ ಡ್ಯಾನಿಷ್ ಮತ್ತೊಬ್ಬಳನ್ನು ಮದುವೆಯಾಗಲು ಮುಂದಾಗಿದ್ದ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿನ ದರ್ಗಾದಲ್ಲಿ ಇಂದು ಡ್ಯಾನಿಷ್ನ ಎರಡನೇ ವಿವಾಹಕ್ಕೆ ಏರ್ಪಾಟು ಮಾಡಲಾಗಿತ್ತು. ಈ ಬಗ್ಗೆ ವಿಷಯ ತಿಳಿದ ಮೊದಲನೇ ಪತ್ನಿ ರಾಜಬಿ, ದರ್ಗಾಗೇ ತೆರಳಿ ರಂಪ ಮಾಡಿದ್ದಾಳೆ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಕೊನೆಗೂ ಡ್ಯಾನಿಷ್ನ ಎರಡನೇ ಮದುವೆಯನ್ನು ನಿಲ್ಲಿಸುವಲ್ಲಿ ಮೊದಲ ಪತ್ನಿ ಯಶಸ್ವಿಯಾಗಿದ್ದಾಳೆ.
ಈ ದಂಪತಿ ಧಾರವಾಡದಲ್ಲಿ ವಾಸವಿದ್ದು, ರಾಜಬಿ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಡ್ಯಾನಿಷ್ ಸದ್ಯ ಎಲ್ಲಿಯೂ ಕೆಲಸ ಮಾಡುತ್ತಿಲ್ಲ ಎಂಬುದು ಪತ್ನಿ ರಾಜಬಿಯ ಆರೋಪ. ಆದರೆ ಅದನ್ನು ಅಲ್ಲಗಳೆಯುವ ಡ್ಯಾನಿಷ್, ಆಕೆಗೆ ಬೇರೊಬ್ಬನ ಜತೆ ಸಂಬಂಧವಿದೆ. ಕೆಲಸಕ್ಕೆ ಹೋಗುವುದಾಗಿ ಹೇಳಿ ಅವನೊಂದಿಗೆ ಹೊರಗಡೆ ಸುತ್ತಾಡುತ್ತಿದ್ದಾಳೆ. ಜಮಾತ್ನಲ್ಲಿ ಡೈವೋರ್ಸ್ ಮಾಡಿಸಲು ಕರೆಸಿದ್ದರೂ ಸರಿಯಾಗಿ ಸ್ಪಂದಿಸಿಲ್ಲ. ಕೋರ್ಟ್ ನೋಟಿಸ್ ಕೂಡ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಆಕೆಯೊಂದಿಗೆ ಬದುಕಲು ಇಷ್ಟ ಇಲ್ಲದ್ದರಿಂದ ಮತ್ತೊಂದು ಮದುವೆಗೆ ಮುಂದಾಗಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾನೆ. ಒಟ್ಟಿನಲ್ಲಿ ಸದ್ಯಕ್ಕಂತೂ ಎರಡನೇ ಮದುವೆ ನಿಂತುಹೋಗಿದೆ.