

ಹುಣಸೂರು: ನಗರಸಭೆಯ ನೂತನ ಅಧ್ಯಕ್ಷರಾಗಿ 7ನೇ ವಾರ್ಡ್‌ನ ಜೆಡಿಎಸ್ ಸದಸ್ಯ ಶರವಣ, ಉಪಾಧ್ಯಕ್ಷರಾಗಿ 2ನೇ ವಾರ್ಡ್‌ನ ಪಕ್ಷೇತರ ಸದಸ್ಯೆ ಆಶಾ ಕೃಷ್ಣನಾಯಕ ಆಯ್ಕೆಯಾದರು.
ಸೋಮವಾರ ನಗರಸಭೆಯಲ್ಲಿ ಚುನಾವಣೆ ನಿಗದಿಯಾಗಿತ್ತು. ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಶರವಣ ಸ್ವಪಕ್ಷ ಜೆಡಿಎಸ್‌ನ 7 ಮತಗಳು, ಬಿಜೆಪಿಯ 3, ಐವರು ಪಕ್ಷೇತರರು, ಶಾಸಕ ಹರೀಶ್‌ಗೌಡ ಮತ್ತು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತಗಳೊಂದಿಗೆ ಒಟ್ಟು 17 ಮತಗಳನ್ನು ಗಳಿಸಿ ವಿಜಯದ ನಗೆ ಬೀರಿದರೆ, ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸ್ವಾಮಿಗೌಡ ಸ್ವಪಕ್ಷದ 13 ಮತಗಳು ಮತ್ತು ಎಸ್‌ಡಿಪಿಐನ 2 ಮತಗಳೊಂದಿಗೆ ಒಟ್ಟು 15 ಮತಗಳನ್ನು ಗಳಿಸಿ ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆಗೆ ಮೀಸಲಿದ್ದರಿಂದ ಆಶಾ ಕೃಷ್ಣನಾಕ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಎಚ್.ಬಿ.ವಿಜಯಕುಮಾರ್ ಕಾರ್ಯನಿರ್ವಹಿಸಿದರು. ಪೌರಾಯುಕ್ತೆ ಮಾನಸಾ, ಚುನಾವಣಾ ಸಿಬ್ಬಂದಿ ಹಾಜರಿದ್ದರು.
ಕೈಕೊಟ್ಟ ಕಾಂಗ್ರೆಸ್ ಸದಸ್ಯ, ನಿರ್ಣಾಯಕರಾದ ಪಕ್ಷೇತರರು:
ಚುನಾವಣೆ ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದ್ದರಿಂದ ಬೆಳಗ್ಗೆ 11.45ರ ವೇಳೆಗೆ ಶಾಸಕ ಹರೀಶ್‌ಗೌಡರನ್ನು ಒಳಗೊಂಡು ಮೈತ್ರಿಕೂಟದ ಸದಸ್ಯರೆಲ್ಲರೂ ನಗರಸಭೆ ಆವರಣಕ್ಕೆ ಬಸ್‌ನಲ್ಲಿ ಬಂದಿಳಿದರು. ಅದಕ್ಕೂ ಸ್ವಲ್ಪಹೊತ್ತಿಗೆ ಮುಂಚೆ ಕಾಂಗ್ರೆಸ್ ಸದಸ್ಯರು ಟಿಟಿಯಲ್ಲಿ ಒಂದಾಗಿ ಬಂದಿಳಿದು ಚುನಾವಣಾ ಸಭಾಂಗಣಕ್ಕೆ ತೆರಳಿದರು.
ಜೆಡಿಎಸ್‌ನ ಸದಸ್ಯ ಗಾಣಿಗ ಸಮಾಜದ ಶರವಣ ಮೊದಲಿನಿಂದಲೂ ಆಕಾಂಕ್ಷಿಯಾಗಿದ್ದರು. ಶಾಸಕ ಹರೀಶ್‌ಗೌಡ ಅವರು ಎಲ್ಲ ಪಕ್ಷೇತರರನ್ನೂ ಒಗ್ಗೂಡಿಸಿ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡರು. ಮೈತ್ರಿಕೂಟದ ಲೆಕ್ಕಾಚಾರದಂತೆ 17 ಮತಗಳು ಪಕ್ಷದ ಅಭ್ಯರ್ಥಿಪರ ಬಂದವು. ವರ್ಷದ ಹಿಂದೆ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್‌ನ ದಲಿತ ನಾಯಕ ಬಸವಲಿಂಗಯ್ಯರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದ ಶಾಸಕ ಹರೀಶ್‌ಗೌಡ 50 ವರ್ಷಗಳ ಅವಧಿಯ ಟಿಎಪಿಸಿಎಂಎಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದರು. ಇದೀಗ ನಗರಸಭೆಯಲ್ಲೂ ಸೂಕ್ಷಾತಿಸೂಕ್ಷ್ಮ ಸಮುದಾಯವಾಗಿರುವ ಗಾಣಿಗ ಸಮಾಜದ ಸದಸ್ಯನಿಗೆ ಅಧ್ಯಕ್ಷಗಿರಿ ಕೊಡಿಸುವಲ್ಲಿ ಯಶಸ್ವಿಯಾದರು.
ಕಾಂಗ್ರೆಸ್ ಪಕ್ಷದಲ್ಲಿ 14 ಸದಸ್ಯರಿದ್ದು ಚುನಾವಣೆಯಲ್ಲಿ 13 ಜನ ಮಾತ್ರ ಭಾಗವಹಿಸಿದ್ದರು. 6ನೇ ವಾರ್ಡ್‌ನ ಸದಸ್ಯ ದೇವನಾಯ್ಕ ಅನಾರೋಗ್ಯದ ಕಾರಣವೊಡ್ಡಿ ಚುನಾವಣೆಯಲ್ಲಿ ಭಾಗವಹಿಸಲಿಲ್ಲ. ಹಾಗಾಗಿ ಅವರ ಸದಸ್ಯಬಲ 13 ಕುಗ್ಗಿತು. ಎಸ್‌ಡಿಪಿಐನ ಇಬ್ಬರು ಸದಸ್ಯರಾದ ಸಯ್ಯದ್ ಯೂನೂಸ್, ಸಮೀನಾ ಬಾನು ಬೆಂಬಲ ಕಾಂಗ್ರೆಸ್‌ಗೆ ದಕ್ಕಿತು.
ಪಕ್ಷೇತರರ ಒಗ್ಗಟ್ಟು:
ಸ್ವಪಕ್ಷೀಯನ ವಿರುದ್ಧವೇ ಕೈ ಪ್ರತಿಭಟನೆ
ಕಾಂಗ್ರೆಸ್ ಪಕ್ಷದ ಸದಸ್ಯ ದೇವನಾಯ್ಕ ಚುನಾವಣೆಗೆ ಗೈರಾಗಿದ್ದು ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿತ್ತು. ಚುನಾವಣೆ ಮುಗಿದ ನಂತರ ನಗರಸಭೆ ಆವರಣದಲ್ಲಿ ಒಂದೆಡೆ ಜೆಡಿಎಸ್-ಬಿಜೆಪಿ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಇತ್ತ ಕಾಂಗ್ರೆಸ್ ಪಕ್ಷದ ಕೆಲ ಕಾರ್ಯಕರ್ತರು ದೇವನಾಯ್ಕರ ವಿರುದ್ಧ 30 ಲಕ್ಷ ರೂ.ಗೆ ಮಾರಾಟವಾದ ದೇವನಾಯ್ಕರಿಗೆ ಧಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕುತೂಹಲ ಕೆರಳಿಸಿದ್ದ ಗೀತಾ ನಿಂಗರಾಜು:
ಮೈತ್ರಿಕೂಟದ ಅಭ್ಯರ್ಥಿಯೊಂದಿಗೆ ಕಾಂಗ್ರೆಸ್ ಸದಸ್ಯೆ 24ನೇ ವಾರ್ಡ್‌ನ ಗೀತಾ ನಿಂಗರಾಜು ಬಸ್‌ನಲ್ಲಿ ಚುನಾವಣೆಗೆ ಬಂದಿದ್ದರು. ಆದರೆ, ಮತದಾನದ ವೇಳೆ ಗೀತಾ ನಿಂಗರಾಜು ತಮ್ಮ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿ ಎಲ್ಲರಲ್ಲಿ ಕೆರಳಿದ್ದ ಕುತೂಹಲಕ್ಕೆ ತಣ್ಣೀರು ಎರಚಿದರು. ಚುನಾವಣೆ ಸೋಲಿನ ನಂತರ ಕಾಂಗ್ರೆಸ್ ಸದಸ್ಯರು ಸಭೆಯಿಂದ ಹೊರನಡೆದರೆ, ಗೀತಾ ನಿಂಗರಾಜು ಮಾತ್ರ ಎನ್‌ಡಿಎ ಮೈತ್ರಿ ಅಭ್ಯಥಿಯ ಗೆಲುವಿನ ಸಂಭ್ರಮವನ್ನು ನೋಡುತ್ತಾ ಕುಳಿತಿದ್ದರು.
ಆಶ್ರಯ ಸಮಿತಿ ಸಭೆ ಆಯೋಜಿಸಲಿದ್ದೇವೆ
ಶಾಸಕ ಜಿ.ಡಿ.ಹರೀಶ್‌ಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಕೆಲ ವರ್ಷಗಳಿಂದ ಅಭಿವೃದ್ಧಿ ಮರೀಚಿಕೆಯಾಗಿದೆ. ಇದೀಗ ಎನ್‌ಡಿಎ ಅಭ್ಯರ್ಥಿಯಾಗಿ ಶರವಣ ಆಯ್ಕೆಯಾಗುವ ಮೂಲಕ ನಗರದಲ್ಲಿ ಅಭಿವೃದ್ಧಿಗೆ ಹೊಸತನ ನೀಡಲು ಉದ್ದೇಶಿಸಲಾಗಿದೆ. ಹುಣಸೂರಿನಲ್ಲಿ ದಶಕಗಳಿಂದ ಕಾಡುತ್ತಿರುವ ಬಡಜನರಿಗೆ ನಿವೇಶನ ವಿತರಣೆ ಕುರಿತಂತೆ ಈವರೆಗೆ ಆಶ್ರಯ ಸಮಿತಿ ಸಭೆಯನ್ನೇ ನಡೆಸಿಲ್ಲ. ಹಾಗಾಗಿ ಆಶ್ರಯ ಸಮಿತಿ ಸಭೆಯನ್ನು ಆಯೋಜಿಸುವ ಕುರಿತು ಪ್ರಥಮ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೈತ್ರಿ ಅಭ್ಯರ್ಥಿಯಾಗಿ ಶರವಣರನ್ನು ಗೆಲ್ಲಿಸಬೇಕೆಂದು ನಾವೆಲ್ಲರೂ ಒಂದಾಗಿ ಚುನಾವಣೆ ಎದುರಿಸಿ ಯಶಸ್ವಿಯಾಗಿದ್ದೇವೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ನಾನು ನಗರಸಭೆಯೊಂದಿಗೆ ಇದ್ದೇನೆ ಎಂದರು.
ನೂತನ ಅಧ್ಯಕ್ಷ ಶರವಣ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ನೂತನ ಉಪಾಧ್ಯಕ್ಷೆ ಆಶಾ ಕೃಷ್ಣನಾಯ್ಕ, ಸದಸ್ಯರಾದ ದೇವರಾಜ್, ಕೃಷ್ಣರಾಜ ಗುಪ್ತ, ಶಾಹಿನ್ ತಾಜ್, ಶ್ರೀನಾಥ್, ರಾಣಿ ಪೆರುಮಾಳ್, ರಾಧಾ, ಬಿಜೆಪಿಯ ಗಣೇಶ್ ಕುಮಾರಸ್ವಾಮಿ, ವಿವೇಕಾನಂದ, ಹರೀಶ್, ಪಕ್ಷೇತರರಾದ ಮಾಲಿಕ್‌ಪಾಷ, ಸತೀಶ್‌ಕುಮಾರ್, ದೊಡ್ಡಹೆಜ್ಜೂರು ರಮೇಶ್, ಪರ್ವೀನ್ ತಾಜ್, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಜರಿದ್ದರು.